ನವದೆಹಲಿ: ಲೋಕಸಭಾ ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಬೇಕೆಂಬ ಉದ್ದೇಸ್ಗದಿಂದ ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರಕ್ಕೆ ತಡೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯೋಗ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟರೆ ಚುನಾವಣಾ ನೀತಿ ಸಂಹಿತಿಗೆ ಧಕ್ಕೆ ಮಾಡಿದಂತೆ. ಹೀಗಾಗಿ ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಯ ಉದ್ದೇಶದಿಂದ ಈ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ಆಯೋಗ ಹೇಳಿಕೆ ನೀಡಿದೆ.
ಚಿತ್ರವನ್ನು ತಡೆಯುವ ಹಿಂದೆ ಆಯೋಗಕ್ಕೆ ಬೇರಾವ ಹಿತಾಸಕ್ತಿ ಇಲ್ಲ. ಆದರೆ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ವೈಭವೀಕರಿಸಲಾಗಿದ್ದು, ಇದರಿಂದ ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಇದೇ ಕಾರಣಕ್ಕೆ ಆಯೋಗ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿದ್ದು, ಚುನಾವಣೆ ಮುಕ್ತಾಯದ ಬಳಿಕ ಚಿತ್ರ ಬಿಡುಗಡೆ ಮಾಡಬಹುದು ಎಂದು ಹೇಳಿದೆ.
ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ಆಯೋಗ, ‘ಇದು ಮೋದಿಯವರ ಜೀವನ ಚರಿತ್ರೆ ಎನ್ನುವುದಕ್ಕಿಂತ ರಾಜಕೀಯ ಕಾರ್ಯಸೂಚಿಗಳನ್ನು ತೋರಿಸಿದ ಸಂತ ಚರಿತ್ರೆ ಎನ್ನಬಹುದು. ಈಗಲೇ ಬಿಡುಗಡೆ ಮಾಡಿದರೆ ಚುನಾವಣಾ ವ್ಯವಸ್ಥೆ ಆಡಳಿತ ರೂಢ ಬಿಜೆಪಿ ಪಕ್ಷದ ಕಡೆಗೆ ವಾಲಿದಂತೆ ಆಗುತ್ತದೆ. ಹಾಗಾಗಿ ಸದ್ಯ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ’ ಎಂದು ತನ್ನ ನಿಲುವನ್ನು ಆಯೋಗ ಸ್ಪಷ್ಟಪಡಿಸಿತ್ತು.
ಮೋದಿಯವರ ಬಯೋಪಿಕ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ತೀರ್ಮಾನಿಸಿ ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಈ ಹಿಂದೆ ಸೂಚನೆ ನೀಡಿತ್ತು. ಅದಾದ ಬಳಿಕ ಆಯೋಗದ ಏಳು ಅಧಿಕಾರಿಗಳನ್ನೊಳಗೊಂಡ ತಂಡ ಪಿಎಂ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾವನ್ನು ವೀಕ್ಷಿಸಿತ್ತು. ಈಗ ಆಯೋಗ ತನ್ನ ವರದಿ ನೀಡಿದೆ. ಆಯೋಗದ ವರದಿಯಲ್ಲಿ ‘ಈ ಬಯೋಪಿಕ್ ನಲ್ಲಿ ನರೇಂದ್ರ ಮೋದಿಯವರನ್ನು ತುಂಬ ಪ್ರಶಂಸಿಸಿ ಚಿತ್ರಿಸಲಾಗಿದೆ. ಅಲ್ಲದೆ ಬಹುತೇಕ ಪ್ರತಿಪಕ್ಷಗಳು ಭ್ರಷ್ಟವೆಂದು ಹಲವು ದೃಶ್ಯಗಳಲ್ಲಿ ಬಿಂಬಿಸಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿದರೆ ಚುನಾವಣಾ ವ್ಯವಸ್ಥೆ ಒಂದು ಪಕ್ಷದ ಪರ ಒಲವು ತೋರಿದಂತೆ ಆಗುತ್ತದೆ ಎಂದು ಹೇಳಿದೆ.
In Modi biopic Election Commission stopped