ನವದೆಹಲಿ, ಏ.24- ನನಗೆ ಬಾಲ್ಯದಿಂದಲೂ ಸೇನೆಗೆ ಸೇರಬೇಕು ಯೋಧನಾಗಬೇಕೆಂಬ ಆದ್ಯಮ ಬಯಕೆಯಿತ್ತೇ ಹೊರತು ನಾನು ಈ ದೇಶದ ಪ್ರಧಾನಿಮಂತ್ರಿಯಾಗುತ್ತೇನೆ ಎಂದು ಎಂದಿಗೂ ತಿಳಿದಿರಲಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯ ನಂ. 7, ಲೋಕಕಲ್ಯಾಣ ಮಾರ್ಗ(ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸ) ದಲ್ಲಿ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ಕುಮಾರ್ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ನರೇಂದ್ರ ಮೋದಿ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.
ನನಗೆ ಬಾಲ್ಯದಿಂದಲೂ ಮಿಲಿಟರಿ ಬಗ್ಗೆ ತುಂಬಾ ಆಸಕ್ತಿಯಿತ್ತು. ನಮ್ಮ ಮನೆ ಬಳಿ ಸೇನಾಶಾಲೆಯೊಂದಿತ್ತು. ಅಲ್ಲಿಗೆ ಅನೇಕ ಸೇನಾಧಿಕಾರಿಗಳು ಬರುತ್ತಿದ್ದರು. ಅವರ ಸಮವಸ್ತ್ರ, ಶಿಸ್ತು ಇವುಗಳಿಂದ ನಾವು ಚಿಕ್ಕನಿಂದಲೇ ತುಂಬಾ ಪ್ರಭಾವಿತನಾಗಿದ್ದೆ. ಆಗಿನಿಂದಲೂ ನನಗೆ ಸೇನೆ ಸೇರಬೇಕು. ಯೋಧನಾಗಿ ದೇಶ ಸೇವೆ ಮಾಡಬೇಕೆಂಬ ಬಯಕೆಯಿತ್ತು. ಆದರೆ ನಾನು ಈ ದೇಶದ ಪ್ರಧಾನಮಂತ್ರಿಯಾಗುತ್ತೇನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದು ಮೋದಿ ಅಕ್ಷಯ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನಗೆ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಬಾಲ್ಯದಲ್ಲೇ ಪ್ರಭಾವ ಬೀರಿದ್ದರು. ಇದಕ್ಕೆ ಕಾರಣವೂ ಇತ್ತು. ನಮ್ಮ ಮನೆಯ ಬಳಿ ರಾಮಕೃಷ್ಣ ಆಶ್ರಮ ಇತ್ತು. ನಾನು ಚಿಕ್ಕ ವಯಸ್ಸಿನಲ್ಲೇ ಆಗಾಗ ಆಶ್ರಮಕ್ಕೆ ಭೇಟಿ ನೀಡುತ್ತಿದ್ದೆ. ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಪೋಟೊಗಳು ಮತ್ತು ಅವರ ಅಮರ ಸಂದೇಶಗಳನ್ನು ಓದಿ ಪ್ರಭಾವಿತನಾಗಿದ್ದೆ ಎಂದು ಪ್ರಧಾನಿ ಹೇಳಿದರು.
ಅಕ್ಷಯ್ ಜತೆ ನಡೆದ ಈ ವಿಶೇಷ ಸಂವಾದ ಬಹುತೇಕ ರಾಜಕೀಯ ವಿಷಯಗಳಿಂದ ದೂರವಾಗಿತ್ತು. ಮೋದಿಯವರ ವೈಯಕ್ತಿಕ ವಿಷಯಗಳು ಮತ್ತು ಕೆಲವು ಸಂಗತಿಗಳು ಈ ಸಂದರ್ಶನದ ಮುಖ್ಯಾಂಶಗಳಾಗಿದ್ದವು.
ನೀವು ತುಂಬಾ ಕೋಪಿಷ್ಟರು ಎಂಬ ಆರೋಪಿಗಳಿವೆಲ್ಲ ಎಂಬ ಪ್ರಶ್ನೆಗೆ ಕಿಲಾಡಿ ಉತ್ತರ ಬಯಸಿದರು.
ನಾನು ಸಾಮಾನ್ಯವಾಗಿ ಕೋಪಿಷ್ಟ ಅಲ್ಲವೆ ಅಲ್ಲ, ನಾನು ಶಿಸ್ತು ಬಯಸುವ ವ್ಯಕ್ತಿ ಶಿಸ್ತು ಪಾಲನೆಗಾಗಿ ಕೆಲವು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದು ನಾನು ಕೋಪಿಷ್ಟ ಎಂಬಂತೆ ಬಿಂಬಿತವಾಗಿದೆ. ಆದರೂ ಕೆಲವು ಅನಿವಾರ್ಯ ಸನ್ನಿವೇಶಗಳಲ್ಲಿ ನಾನು ಕೋಪಿಸಿಕೊಳ್ಳುತ್ತೇನೆ. ಇದು ಸಹಜ ಕೂಡ. ವಿನಾಕಾರಣ ಕೋಪಗೊಳ್ಳುವಂತಹ ಸಂದರ್ಭಗಳನ್ನು ತಪ್ಪಿಸಲು ನಾನು ಪ್ರಯತ್ನಿಸುತ್ತೇನೆ. ಅದೇ ರೀತಿ ನನ್ನಲ್ಲಿರುವ ಕೋಪದ ವರ್ತನೆಯನ್ನು ಹತೋಟಿಯಲ್ಲಿಡಲು ಬಯಸುತ್ತೇನೆ ಎಂದು ಪ್ರಧಾನಿ ನಸುನಗುತ್ತಾ ಹೇಳಿದರು.
ನಾನು ನನ್ನ ಸಹೋದ್ಯೋಗಿಗಳು ಮತ್ತು ನನ್ನ ಕಾರ್ಯಾಲಯದಲ್ಲಿರುವ (ಪಿಎಂಒ) ಸಿಬ್ಬಂದಿಯೊಂದಿಗೆ ತುಂಬಾ ಅನ್ಯೋನವಾಗಿ ಇರುತ್ತೇನೆ. ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಅವರೊಂದಿಗೆ ಹಾಸ್ಯಚಟಾಕಿಗಳನ್ನು ಹಾರಿಸುತ್ತಾ ಊಟ-ಉಪಹಾರ ಸೇವಿಸುತ್ತೇನೆ ಕೆಲಸಕ್ಕಾಗಿ ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ಮೋದಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ನಿಮಗೆ ಗೊತ್ತೆ …? ನನ್ನ ವಿರೋಧ ಪಕ್ಷಗಳಲ್ಲೂ ನನಗೆ ಅತ್ಯಂತ ಆಪ್ತರಿದ್ದಾರೆ ಉದಾಹರಣೆಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ. ಅವರು ಪ್ರತಿವರ್ಷ ನನಗೆ ಎರಡು ಅಥವಾ ಮೂರು ಕುರ್ತಾಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಪ್ರೀತಿಯಿಂದ ಕಳುಹಿಸುತ್ತಾರೆ. ಅದು ಈಗಲೂ ಮುಂದುವರೆದಿದೆ. ನನಗೆ ಬಂಗಾಳಿ ಸಿಹಿ ತಿನಿಸು ಎಂದರೆ ನನಗೆ ತುಂಬಾ ಇಷ್ಟ. ದೀದಿ ಆಗಾಗ ಬಂಗಾಳಿ ಸ್ವೀಟ್ಗಳನ್ನು ಕಳುಹಿಸುತ್ತಾರೆ ಅದೇ ರೀತಿ ನೆರೆರಾಷ್ಟ್ರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೂಡ ನನಗೆ ಢಾಕಾದಿಂದ ಆಗಾಗ ಸಿಹಿ ತಿಂಡಿಗಳನ್ನು ರವಾನಿಸುತ್ತಾರೆ ಎಂದು ಪ್ರಧಾನಿ ಹೇಳಿದರು.
ನನ್ನ ವಿರುದ್ಧ ಆಗಾಗ ವಾಗ್ದಾಳಿ ನಡೆಸುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಧುರೀಣ ಗುಲಾಂ ನಬೀ ಆಜಾದ್ ಕೂಡ ನನಗೆ ಒಳ್ಳೆ ದೋಸ್ತ್ ಎಂದು ಮೋದಿ ಹೇಳಿದಾಗ ಕಿಲಾಡಿ ಮುಖದಲ್ಲಿ ಮುಗಳ್ನಗೆ ಮೂಡಿತು.
ನಂತರ ಪ್ರಧಾನಿ ಮತ್ತು ಅಕ್ಷಯ್ ಸಂದರ್ಶನ ವಾಕ್ ವಿತ್ ಟಾಕ್ನೊಂದಿಗೆ ನಡೆಯಿತು. ಪ್ರಧಾನಿ ನಿವಾಸದ ಹಸಿರು ಉದ್ಯಾನವನದಲ್ಲಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಕಿಲಾಡಿ ವಾಯುವಿಹಾರ ಮಾಡುತ್ತ ಸಂವಾದ ನಡೆಸಿದರು.
ಮೋದಿಜೀ, ನನ್ನ ಮಗಳನ್ನು ಶಾಲೆ ಕರೆದ್ಯೂಯುವ ಕಾರಿನ ಚಾಲಕ ನಿಮಗೊಂದು ಪ್ರಶ್ನೆ ಕೇಳುವಂತೆ ನನಗೆ ಹೇಳಿದ್ದಾನೆ. ನಿಮಗೆ ಮಾವಿನ ಹಣ್ಣುಗಳೆಂದರೆ ತುಂಬಾ ಇಷ್ಟವೆ…? ನೀವು ಅದನ್ನು ಕತ್ತರಿಸಿ ತಿನ್ನುತ್ತೀರೋ ಅಥವಾ ಚಿಕ್ಕಮಕ್ಕಳಂತೆ ಸಿಪ್ಪೆ ಸಮೇತ ಚಪ್ಪರಿಸಿಕೊಂಡು ಸವಿಯುತ್ತೀರೋ ಎಂಬುದು ಆತನ ಪ್ರಶ್ನೆ ಇದಕ್ಕೆ ನಿಮ್ಮ ಉತ್ತರವೇನು..?
ಮೋದಿ(ನಸುನಗುತ್ತ) : ಈ ಪ್ರಶ್ನೆಗೆ ಮತ್ತೆ ನಾನು ನನ್ನ ಬಾಲ್ಯದ ನೆನಪಿನ ಸುರುಳಿಯನ್ನು ಬಿಚ್ಚುತ್ತೇನೆ. ನಮ್ಮ ಮನೆಯಿಂದ ಸ್ವಲ್ಪ ದೂರು ಮಾವಿನ ತೋಟವಿತ್ತು. ಅಲ್ಲಿಗೆ ಬಾಲ್ಯದ ಗೆಳೆಯರೆಲ್ಲ ನುಗ್ಗುತ್ತಿದ್ದೆವು ಮನಬಂದಂತೆ ಮಾವಿನಹಣ್ಣಗಳನ್ನು ಕಿತ್ತು. ಅದನ್ನು ತೊಳೆಯದೆ ತಿಂದು ಹಾಕುತ್ತಿದ್ದೇವು.
ಈಗಲೂ ನನಗೆ ಮಾವಿನ ಹಣ್ಣು ಬಲುಪ್ರಿಯ. ಸಮಯ ಸಿಕ್ಕರೆ ಕತ್ತರಿಸದೆ ಹಣ್ಣನ್ನು ಹಾಗೆ ಚಪ್ಪರಿಸುವ ವ್ಯಕ್ತಿ ನಾನು ಎಂದು ಹೇಳಿದರು.
ನೀವು ತಾಯಿ ಮತ್ತು ಕುಟುಂಬ ಸದಸ್ಯರನ್ನು ಬಿಟ್ಟು ನಿಮ್ಮ ಜೀವನವನ್ನು ರಾಜಕೀಯಕ್ಕೆ ಸಮರ್ಪಿಸಿಕೊಂಡಿದ್ದೀರಿ. ನಿಮ್ಮ ಕುಟುಂಬದವರೊಂದಿಗೆ ಬೆರೆಯಬೇಕೆಂದು ನಿಮಗೆ ಅನ್ನಿಸಿಲ್ಲವೆ ಎಂದು ಅಕ್ಷಯ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನಾನು ನನ್ನ ಕುಟುಂಬ ಸದಸ್ಯರಿಂದ ದೂರ ಇದ್ದೇನೆ. ಅವರಿಂದ ದೂರವಿದ್ದು ಜೀವನ ನಡೆಸುವುದು ಅಭ್ಯಾಸವಾಗಿ ಹೋಗಿದೆ. ಆಗಾಗ ನನ್ನ ತಾಯಿಯನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ಆತ್ಮೀಯವಾಗಿ ಇರುವ ಸಮಯವಕಾಶ ದೊರೆಯದ ಬಗ್ಗೆ ಅವರ ಬಳಿ ಅಸಮಾಧಾನ ತೊಡಿಕೊಳ್ಳುತ್ತೇನೆ ಆದರೆ ನನ್ನ ತಾಯಿ ನನಗೆ ಸಮಾಧಾನಪಡಿಸಿ ನಮ್ಮ ಬಗ್ಗೆ ಚಿಂತಿಸ ಬೇಡ. ದೇಶದ ಬಗ್ಗೆ ಚಿಂತಿಸು ಇಲ್ಲಿಗೆ ಬಂದು ನಿನ್ನ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳಬೇಡ ಎಂದು ಸಂತೈಸಿದ್ದಾರೆ. ಹೀಗಾಗಿ ನಾನು ದಿನದ 24 ತಾಸುಗಳು ರಾಜಕೀಯ ರಂಗದಲ್ಲಿರಲು ಸಾಧ್ಯವಾಗಿದೆ ಎಂದು ಮೋದಿ ಉತ್ತರಿಸಿದಾಗ ಅವರ ಕಣ್ಣಂಚಿನಲ್ಲಿ ಕಂಬನಿಯೊಂದು ಕಾಣುತ್ತಿತ್ತು.
ನಾನು ಶಾಸಕನಾಗುವ ತನಕ ನನ್ನ ಬಳಿ ಬ್ಯಾಂಕ್ ಖಾತೆ ಇರಲಿಲ್ಲ. ಆನಂತರ ವಷ್ಟೇ ನಾನು ಬ್ಯಾಂಕ್ ಅಕೌಂಟ್ ತೆರೆದಿದ್ದು ಎಂದು ಮೋದಿ ಹೇಳಿದಾಗ ಅಕ್ಷಯ್ ಚಕಿತರಾದರು.
ಯಾವ ವ್ಯಕ್ತಿಯೇ ಇರಲಿ ಅಥವಾ ಯಾವುದೇ ಕ್ಷೇತ್ರವಿರಲಿ ಪ್ರರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರಬಹುದು. ಆತ್ಮವಿಶ್ವಾಸ, ಶ್ರದ್ಧೆ, ದೃಢಪ್ರಯತ್ನದಿಂದ ಇದು ಸಾಧ್ಯ ಎಂದು ಮೋದಿ ಸಲಹೆ ನೀಡಿದರು.