ಬೆಂಗಳೂರು, ಏ.24- ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇರುವುದರಿಂದ ಸಮಾರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣಭೈರೇಗೌಡ ಎಚ್ಚರಿಸಿದ್ದಾರೆ.
ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಸಚಿವರು, ಬರಪರಿಸ್ಥಿತಿ ಗಂಭೀರವಾಗಿರುವುದರಿಂದ ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಟಾಸ್ಕ್ಪೋರ್ಸ್ಗಳನ್ನು ರಚನೆ ಮಾಡಿ ಅನುದಾನ ಒದಗಿಸಲಾಗಿದೆ. ಟಾಸ್ಕ್ಪೋರ್ಸ್ಗಳು ಸಮಾರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.
ರಾಜ್ಯದ 176 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಇಂತಹ ತಾಲ್ಲೂಕುಗಳಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಕೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಏ.23ರ ನಂತರ ಅವಶ್ಯ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಲು ಮತ್ತು ಕಾಮಗಾರಿ ಅನುಷ್ಠಾನಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿರುವುದರಿಂದ ತುರ್ತಾಗಿ ಅಲ್ಪಾವಧಿ ಟೆಂಡರ್ಗಳನ್ನು ಕರೆದು ಕುಡಿಯುವ ನೀರಿನ ಕಾಮಗಾರಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅವಶ್ಯಕತೆ ಇರುವ ಕಡೆ ಹೊಸ ಬೋರ್ವೆಲ್ಗಳನ್ನು ಕೊರೆಯಬೇಕು, ಪ್ರತಿ ತಾಲ್ಲೂಕಿಗೆ ಒಂದು ಅಥವಾ ಎರಡು ಬೋರ್ವೆಲ್ ಕೊರೆಯುವ ಏಜೆನ್ಸಿಗಳನ್ನು ಟೆಂಡರ್ ಮೂಲಕ ಗುರುತಿಸಲಾಗುತ್ತಿದೆ. 15 ತಿಂಗಳ ಅವಧಿಗೆ ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಗಳ ಬಳಿ ಇರುವ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಗ್ರಾಮಪಂಚಾಯ್ತಿಗಳ ಅನುದಾನವನ್ನು ಬಳಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಒಂದು ವೇಳೆ ಹಣದ ಕೊರತೆ ಕಂಡುಬಂದಲ್ಲಿ ಟಾಸ್ಕ್ಪೋರ್ಸ್ಗಳಿಗೆ ಒದಗಿಸಲಾದ ಅನುದಾನವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.
ಬತ್ತಿದ ಕೊಳವೆ ಬಾವಿಗಳ ಸಾಮಾಗ್ರಿಗಳನ್ನು ಶೇಖರಿಸಿ ಹೊಸ ಕೊಳವೆಬಾವಿಗಳಿಗೆ ಬೇಕಾಗುವ ಪಂಪ್ಸೆಟ್, ಜಿಐ ಪೈಪ್ ಮತ್ತು ಕೇಬಲ್ಗಳನ್ನು ಕಡ್ಡಾಯವಾಗಿ ಉಪಯೋಗಿಸಲು ತಿಳಿಸಲಾಗಿದೆ.
ಹಳೆಯ ವಿದ್ಯುತ್ ಸಂಪರ್ಕವನ್ನು ಹೊಸ ಕೊಳವೆ ಬಾವಿಗೆ ವರ್ಗಾಯಿಸಲು ಸೂಚಿಸಲಾಗಿದೆ. ಅನಗತ್ಯ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.