ಶಾಸಕ ಗಣೇಶ್‍ಗೆ ಜಾಮೀನು ಮಂಜೂರು

ಬೆಂಗಳೂರು,ಏ.24- ಶಾಸಕರ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಬಳ್ಳಾರಿಯ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಹೈಕೋರ್ಟ್‍ನ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಎರಡು ಲಕ್ಷ ಭದ್ರತಾ ಠೇವಣಿ, ಇಬ್ಬರ ಶ್ಯೂರಿಟಿ, ಸಾಕ್ಷ್ಯಗಳನ್ನು ನಾಶಪಡಿಸದಿರುವುದು, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನೊಳಗೊಂಡ ಪೀಠ ಆದೇಶ ನೀಡಿತು.

ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದರಿಂದ ಜೆ.ಎನ್.ಗಣೇಶ್ ಇಂದು ಸಂಜೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಿಡದಿಯ ಈಗಲ್ಟನ್ ರೆಸಾರ್ಟ್‍ನಲ್ಲಿ ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮ ಜೆ.ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದರು.

ಆಪರೇಷನ್ ಕಮಲ ಭೀತಿಯಿಂದ ಪಾರಾಗಲು ಬಿಡದಿ ಸಮೀಪ ಇರುವ ಈಗಲ್ಟನ್ ರೆಸಾರ್ಟ್‍ಗೆ ಶಾಸಕರನ್ನು ಕರೆದುಕೊಂಡು ಹೋಗಿತ್ತು. ಈ ವೇಳೆ ಆನಂದ್ ಸಿಂಗ್ ಮತ್ತು ಜೆ.ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ರಾದ್ದಾಂತವಾಗಿತ್ತು.

ಆಪರೇಷನ್ ಕಮಲದ ಗುಟ್ಟು ರಟ್ಟು ಮಾಡಿದ್ದೇ ಆನಂದ್ ಸಿಂಗ್ ಎಂಬ ಕಾರಣಕ್ಕಾಗಿ ರೆಸಾರ್ಟ್‍ನಲ್ಲಿ ಗಣೇಶ್ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಬಳಿಕ ತೀವ್ರ ಹಲ್ಲೆಗೊಳಗಾಗಿದ್ದ ಆನಂದ್ ಸಿಂಗ್ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಕುಟುಂಬದ ಸದಸ್ಯರು ಗಣೇಶ್ ವಿರುದ್ಧ ಠಾಣೆಗೆ ದೂರು ನೀಡಿದ್ದರು.

ಯಾವಾಗ ಪೊಲೀಸರು ದೂರು ದಾಖಲಿಸಿಕೊಂಡರೋ ಗಣೇಶ್ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಕೊನೆಗೆ ರಾಮನಗರ ಪೊಲೀಸರ ವಿಶೇಷ ತಂಡ ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರ, ತಮಿಳುನಾಡು, ತೆಲಾಂಗಣ ಸೇರಿದಂತೆ ಹಲವು ಕಡೆ ಶೋಧ ನಡೆಸಿ ಕೊನೆಗೆ ಸಿಗದಿದ್ದರಿಂದ ಕೈ ಚೆಲ್ಲಿ ಕುಳಿತಿತ್ತು.

ಗಣೇಶ್ ಗುಜರಾತ್‍ನ ಸೂರತ್ ಸಮೀಪದಲ್ಲಿ ಇರುವುದು ಪತ್ತೆಯಾಗಿದ್ದರಿಂದ ತಕ್ಷಣವೇ ಕರ್ನಾಟಕದಿಂದ ಒಂದು ತಂಡ ಅಲ್ಲಿಗೆ ತೆರಳಿ ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರಿಂದ ಸ್ವಇಚ್ಛೆ ಹೇಳಿಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಹಿಂದೆ ಕೆಳಹಂತದ ನ್ಯಾಯಲಯ ಅವರಿಗೆ ಜಾಮೀನನ್ನು ನಿರಾಕರಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ಹೈಕೋರ್ಟ್‍ನ ಏಕಸದಸ್ಯ ಪೀಠಕ್ಕೆ ಜಾಮೀನು ನೀಡುವಂತೆ ಗಣೇಶ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಎರಡು ಕಡೆ ವಾದ-ವಿವಾದ ನಡೆದ ಬಳಿಕ ಏಕಸದಸ್ಯ ಪೀಠ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ