ಬೆಂಗಳೂರು, ಏ.24- ನಟಸೌರ್ವಭೌಮ, ಧ್ರುವತಾರೆ, ವರನಟ ಡಾ. ರಾಜ್ಕುಮಾರ್ ಅವರ 91ನೇ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಅವರ ಅಭಿಮಾನಿಗಳು ಆಚರಿಸಿದ್ದಾರೆ.
ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ರಾಜ್ ಅವರ ಸಮಾಧಿಗೆ ಕುಟುಂಬಸ್ಥರು ವಿಶೇಷವಾಗಿ ಪೂಜೆ ಸಲ್ಲಿಸಿದರು. ಸಮಾಧಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ ಇಂದು ರಕ್ತದಾನ, ನೇತ್ರದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ವರನಟ ಡಾ.ರಾಜ್ಕುಮಾರ್ ಅಭಿಮಾನಿಗಳು, ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ಹುಟ್ಟುಹಬ್ಬದ ಅಂಗವಾಗಿ ಸ್ಮಾರಕದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೂ ಆಟೋಗಳ ಮೆರವಣಿಗೆ ನಡೆದು ನಂತರ ಅನ್ನಸಂತರ್ಪಣೆ ಮಾಡಲಾಯಿತು.
ರೋಟರಿ ಬೆಂಗಳೂರು ಉದ್ಯೋಗ್ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ತನ್ನ ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ರಾಜ್ಯದ ವಿವಿಧ ಕಡೆಗಳಿಂದ ಅಭಿಮಾನಿಗಳು ಕಂಠೀರವ ಸ್ಟೂಡಿಯೊಗೆ ಆಗಮಿಸಿ ರಕ್ತದಾನ, ನೇತ್ರದಾನದಲ್ಲಿ ಭಾಗಿಯಾದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ಕುಮಾರ್ ಸ್ಮಾರಕ ಮುಖ್ಯವಲ್ಲ. ಅಭಿಮಾನಿಗಳ ಪ್ರೀತಿಗೆ ಸರಿಸಾಟಿಯೇ ಇಲ್ಲ ಎಂದು ಮನದುಂಬಿ ನುಡಿದರು.
ಅಭಿಮಾನಿಗಳ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿ ಇದ್ದಾಗ ಅಭಿಮಾನಿಗಳು ಮನೆಯ ಬಳಿ ಬಂದು ಶುಭಾಷಯ ಕೋರುತ್ತಿದ್ದರು. ಅಪ್ಪಾಜಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬಗ್ಗೆ ಅಭಿಮಾನಿಗಳು ಅಪಾರ ಗೌರವವನ್ನು ಹೊಂದಿದ್ದು ಈಗಲೂ ಸಹ ಆಗಿನಂತೆಯೇ ವಿಶ್ವಾಸವಿರಿಸಿಕೊಂಡಿದ್ದಾರೆ.
ಅಂದು ಮನೆಗೆ ಬರುತ್ತಿದ್ದ ಅಭಿಮಾನಿಗಳು ಇಂದು ಸ್ಮಾರಕದ ಬಳಿ ಬಂದು ಪೂಜೆ ಸಲ್ಲಿಸಿ ಶಿಬಿರಗಳನ್ನು ಏರ್ಪಡಿಸಿರುವುದು ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
ಅಪ್ಪಾಜಿ ಯಾವುದಕ್ಕೂ ಅಪೇಕ್ಷೆ ಪಟ್ಟವರಲ್ಲ, ಅಪ್ಪಾಜಿ, ಅಪ್ಪಾಜಿ ಕನ್ನಡ ಚಿತ್ರರಂಗದ ದಿಗ್ಗಜರಾಗಿದ್ದ ಅಂಬಿ ಮತ್ತು ವಿಷ್ಣು ಈ ಮೂವರ ಬಾಂಧ್ಯವ ಬೇರೆ ರೀತಿಯದ್ದೇ ಆಗಿತ್ತು. ಒಬ್ಬರೊನೊಬ್ಬರೂ ತಮಾಷೆಯಾಗಿ ಕಾಲೆಳೆಯುತ್ತಿದ್ದರು. ಇಂದು ಅಂಬಿ ಅವರ ಐದನೇ ತಿಂಗಳ ಪುಣ್ಯತಿಥಿ ಅಂತ ಗೊತ್ತಿರಲಿಲ್ಲ, ಸುಮಲತಾ ಅವರು ಅಪ್ಪಾಜಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದು ಅವರ ಅಭಿಮಾನ ತೋರುತ್ತದೆ ಎಂದರು.
ರಾಘವೇಂದ್ರ ರಾಜ್ಕುಮಾರ್ ಮಾತನಾಡಿ ಅಭಿಮಾನಿಗಳು ವಿವಿಧ ಕಡೆಯಿಂದ ಇಲ್ಲಿಗೆ ಆಗಮಿಸಿ ಅಪ್ಪಾಜಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಹುಟ್ಟುಹಬ್ಬ ಆಚರಿಸಿರುವುದು ಅವರ ಅಭಿಮಾನವನ್ನು ತೋರುತ್ತದೆ. ಅಪ್ಪಾಜಿ ಅವರು ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿದ್ದರು, ಆದರೆ ಇಂದು ನಾವು ಅಭಿಮಾನಿಗಳ ಮುಖಗಳಲ್ಲಿ ಅಪ್ಪಾಜಿ ಅವರನ್ನು ಕಾಣುತ್ತಿರುವುದರಿಂದ ಅಪ್ಪಾಜಿ ಅಮರರಾಗಿದ್ದಾರೆಂದು ಕಾಣುತ್ತದೆ.
ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕುಟುಂಬ ವರ್ಗ, ರಾಜ್ ಸಹೋದರಿ ನಾಗಮ್ಮ , ಸುಮಲತಾ ಅಂಬರೀಷ್, ಅಂಬಿ ಪುತ್ರ ಅಭಿಷೇಕ್, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ, ಸ್ಮಾರಕದ ಬಳಿ ಪೂಜೆ ಸಲ್ಲಿಸಿದರು.