ಕೊಲಂಬೋ: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಕನ್ನಡಿಗರು ಮೃತಪಟ್ಟಿರುವುದು ದೃಢವಾಗಿದೆ.
ಅದರಲ್ಲಿ ಐವರು ಮೃತದೇಹಗಳನ್ನು ಕೊಲಂಬೋದಿಂದ ಬೆಂಗಳೂರಿಗೆ ತರಲು ರಾಜ್ಯದಿಂದ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಪರಿಷತ್ ಸದಸ್ಯ ಈ.ಕೃಷ್ಣಪ್ಪ ನೇತೃತ್ವದ ನಿಯೋಗ ಕೊಲಂಬೋಗೆ ತೆರಳಿದೆ. ಆದರೆ, ಮೃತದೇಹಗಳನ್ನು ರಾಜ್ಯಕ್ಕೆ ತರಲು ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.
ಸದ್ಯ ಮೃತದೇಹಗಳ ಗುರುತು ಪತ್ತೆ ಹಚ್ಚಲು ಆಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರಿನಿಂದ ನಿನ್ನೆ ಕೊಲಂಬೊಕ್ಕೆ ಈ ಕೃಷ್ಣಪ್ಪ ನೇತೃತ್ವದ ತಂಡ ತೆರಳಿದೆ.
ಈ ತಂಡ ಆಧಿಕಾರಿಗಳೊಂದಿಗೆ ಇನ್ನೂ ಕೆಲವೇ ಕ್ಷಣಗಳಲ್ಲಿ ಮೃತದೇಹ ಗುರುತು ಪತ್ತೆ ಹಚ್ಚಲಿದೆ. ಗುರುತು ಪತ್ತೆಯಾದ ನಂತರ ಮೃತರ ಇತರೆ ಗುರುತಿನ ಚೀಟಿಗಳೊಂದಿಗೆ ಪಾಸ್ ಪೋರ್ಟ್ ಪರಿಶೀಲನೆ ನಡೆಸಲಿದ್ದಾರೆ. ಪಾಸ್ ಪೋರ್ಟ್ ನಲ್ಲಿರುವ ಪೋಟೊ ಮತ್ತು ಬೆಂಗಳೂರಿನಿಂದ ಕೊಂಡೊಯ್ದ ಇತರ ದಾಖಲೆಗಳ ಜೊತೆ ಪರಿಶೀಲನೆ ನಡೆಸಿ, ಮೃತದೇಹ ಗುರುತು ಪತ್ತೆ ಆದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಆ ಬಳಿಕ ಮೃತರು ಕೊಲಂಬೊಗೆ ಬಂದ ಉದ್ದೇಶದ ಬಗ್ಗೆ ಸ್ಥಳೀಯ ಪೊಲೀಸರು ಈ.ಕೃಷ್ಣಪ್ಪ ತಂಡವನ್ನು ಕೌನ್ಸಿಲಿಂಗ್ ಮಾಡಲಿದ್ದಾರೆ. ಕಾನೂನು ಪ್ರಕ್ರಿಯೆಗಳು ಇನ್ನೂ ಶುರುವಾಗದ ಕಾರಣ, ಮೃತದೇಹಗಳು ಇಂದು ಬೆಂಗಳೂರಿಗೆ ತಲುಪುದು ಅನುಮಾನವಾಗಿದೆ. ಸದ್ಯ ಐವರ ಮೃತದೇಹಗಳನ್ನು ಪೊಲೀಸ್ ಶವಾಗಾರದಲ್ಲಿ ಇಡಲಾಗಿದೆ. ಅದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ತರಲು ತಂಡ ಭಾರತೀಯ ರಾಯಭಾರ ಕಚೇರಿ ಮೂಲಕ ಪ್ರಯತ್ನಿಸುತ್ತಿದೆ ಎಂದು ಈ.ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.
ಇನ್ನು ನಾಗರಾಜ ರೆಡ್ಡಿ ಮೃತದೇಹ ಸಂಜೆ ವೇಳೆಗೆ ಬೆಂಗಳೂರು ತಲುಪು ಸಾಧ್ಯತೆ ಇದೆ. ನಾಗರಾಜರೆಡ್ಡಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹ ಸಾಗಿಸಲು ಸ್ಥಳೀಯ ಆಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಇಂದು ಸಂಜೆ 6.45ರ ವೇಳೆಗೆ ನಾಗರಾಜ ರೆಡ್ಡಿ ಮೃತದೇಹ ಬೆಂಗಳೂರು ತಲುಪುವ ಸಾಧ್ಯತೆ ಇದೆ.
ಇನ್ನು ಸಿಎಂ ಕುಮಾರಸ್ವಾಮಿ ಅವರು ಈ ಬಗ್ಗೆ ಟ್ವೀಟ್ ಮಾಡಿ, ಮೃತದೇಹಗಳನ್ನು ಶೀಘ್ರದಲ್ಲೇ ತರುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.