ಆಧುನಿಕ ಸ್ಫೋಟಕಕ್ಕಿಂತ ವೋಟರ್ ಐಡಿಯ ಶಕ್ತಿ ಹೆಚ್ಚು; ಮತ ಚಲಾಯಿಸಿ ಮೋದಿ ಮಾತು

ಗಾಂಧಿನಗರ: ಅಹಮದಾಬಾದ್​ನ ನಿಶಾನ್ ಶಾಲಾ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕು ಚಲಾಯಿಸಿದರು. ಈ ವೇಳೆ ಸ್ಫೋಟಕಕ್ಕಿಂತ ವೋಟರ್​ ಐಡಿಯ ಶಕ್ತಿ ಹೆಚ್ಚಿದೆ ಎಂದರು.

“ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಕುಂಭಮೇಳದಲ್ಲಿ ಸ್ನಾನ ಮಾಡಿದ ಅನುಭವ ಆಗುತ್ತಿದೆ. ಚುನಾವಣಾ ಹಬ್ಬದಲ್ಲಿ ಪಾಳ್ಗೊಳ್ಳುತ್ತಿರುವುದಕ್ಕೆ ಖುಷಿ ಇದೆ,” ಎಂದು ಮೋದಿ ಹೇಳಿದರು.

ಇನ್ನು, ಗುರುತಿನ ಚೀಟಿ ಶಕ್ತಿಯ ಬಗ್ಗೆಯೂ ಪ್ರಧಾನಿ ಮಾತನಾಡಿದ್ದಾರೆ. “ಆಧುನಿಕ ಸ್ಫೋಟಕ ಸಾಧನ (ಐಇಡಿ) ಭಯೋತ್ಪಾದಕರ ಅಸ್ತ್ರ. ವೋಟರ್​ ಐಡಿ ಪ್ರಜಾಪ್ರಭುತ್ವದ ಅಸ್ತ್ರ. ಐಇಡಿಗಿಂತ ಗುರುತಿನ ಚೀಟಿಯ ಶಕ್ತಿ ದೊಡ್ಡದಿದೆ. ನಮ್ಮ ವೋಟರ್​ ಐಡಿಯ ಶಕ್ತಿಯನ್ನು ನಾವು ಅರಿಯಬೇಕು,” ಎಂದಿದ್ದಾರೆ ಮೋದಿ.
ಪ್ರಧಾನಿ ಮೋದಿ ಮತಗಟ್ಟಗೆ ತೆರೆದ ವಾಹನದಲ್ಲಿ ಆಗಮಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೂಡ ಮೋದಿಗೆ ಸಾತ್​ ನೀಡಿದ್ದರು.

ದಾರಿಯುದ್ದಕ್ಕೂ ನಿಂತಿದ್ದ ಹಿಂಬಾಲಕರಿಗೆ ಮೋದಿ ಕೈ ಬೀಸಿದರು. ಈ ವೇಳೆ ನೆರೆದಿದ್ದವರು ಮೋದಿ ಮೋದಿ ಎನ್ನುವ ಘೋಷಣೆ ಕೂಗಿದರು.

ಮೂರನೇ ಹಂತದ ಮತದಾನ ಆರಂಭವಾಗಿದೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿ ಪ್ರಮುಖರು ಕಣದಲ್ಲಿದ್ದಾರೆ. ಇಂದು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರ ಬಳಿ ಕೇಳಿಕೊಂಡಿದ್ದಾರೆ.

“2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವವರು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ. ನಿಮ್ಮ ಮತ ತುಂಬ ಅಮೂಲ್ಯವಾದುದುದು.

ನಮ್ಮ ದೇಶ ಸಾಗುವ ದಿಕ್ಕನ್ನು ನಿಮ್ಮ ಮತ ನಿರ್ಧರಿಸಲಿದೆ. ಸದ್ಯದಲ್ಲೇ ಅಹಮದಾಬಾದ್​ನಲ್ಲಿ ಮತಾದನ ಮಾಡುತ್ತೇನೆ,” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಇವತ್ತು ನಡೆಯುತ್ತಿದೆ. ಕರ್ನಾಟಕ ಸೇರಿ 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 117 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ. ಇದರಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳೂ ಒಳಗೊಂಡಿವೆ. ಏಪ್ರಿಲ್ 18ರಂದು ಚುನಾವಣೆ ನಡೆಯಬೇಕಿದ್ದ ತ್ರಿಪುರಾ ಈಸ್ಟ್ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಅದೂ ಇವತ್ತೇ ನಡೆಯಲಿದೆ.

ಕರ್ನಾಟಕದ ಜೊತೆಗೆ ಅಸ್ಸಾಮ್, ಬಿಹಾರ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್​ಗಡ, ಜಮ್ಮು-ಕಾಶ್ಮೀರ, ತ್ರಿಪುರಾ, ದಮನ್ ಅಂಡ್ ಡಿಯು ಮತ್ತು ದಾದ್ರಾ ನಾಗರ್ ಹವೇಲಿಯಲ್ಲಿ ಮತದಾನವಾಗಲಿದೆ. ಒಡಿಶಾದ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಮತದಾನವಾಗಲಿದೆ. ಗುಜರಾತ್​(26), ಕೇರಳ(20), ಕರ್ನಾಟಕ(14), ಮಹಾರಾಷ್ಟ್ರ(14) ಹಾಗೂ ಉತ್ತರ ಪ್ರದೇಶ(10) ಮೂರನೇ ಹಂತದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾಗುತ್ತಿರುವ ರಾಜ್ಯಗಳಾಗಿವೆ. ಹಾಗೆಯೇ, ಗೋವಾದ 3 ಮತ್ತು ಗುಜರಾತ್​ನ 2 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಉಪಚುನಾವಣೆಯಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ