ಬೆಂಗಳೂರು,ಏ.23- ವರನಟ ಡಾ.ರಾಜ್ಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಾಳೆ ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್ ಚಿತ್ರಗಳ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಡಾ.ರಾಜ್ಕುಮಾರ್ 91ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಕಾರ್ಯಕ್ರಮ ಸಂಯೋಜನೆ ಮಾಡಿದ್ದು, ಗಾಯಕ ಮೋಹನ್ ಮತ್ತು ತಂಡದವರು ಡಾ.ರಾಜ್ಕುಮಾರ್ ಚಿತ್ರಗಳ ಗೀತಗಾಯನ ನಡೆಸಿಕೊಡಲಿದ್ದಾರೆ.
ಹಿರಿಯ ಸಾಹಿತಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ರಾಜ್ಕುಮಾರ್ ಅವರ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ , ನಿರ್ದೇಶಕ ಯೋಗರಾಜ್ ಭಟ್, ರಾಜ್ ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವರನಟ ಡಾ.ರಾಜ್ಕುಮಾರ್ ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವರು ಕರ್ನಾಟಕದ ಸಾಂಸ್ಕøತಿಕ ಶಕ್ತಿಯಾಗಿದ್ದರು. ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕೂಡ ಜನಮಾನಸದಲ್ಲಿ ಅವರ ನೆನಪು ಶಾಶ್ವತ.ರಾಜ್ಯದ ಹಲವು ಕಡೆಗಳಲ್ಲಿ ಜನರು ಸ್ವಯಂಪ್ರೇರಣೆಯಿಂದ ರಾಜ್ಕುಮಾರ್ ಅವರ ಜನ್ಮ ದಿನಾಚರಣೆ ಮಾಡುತ್ತಾರೆ. ರಾಜ್ಯ ಸರ್ಕಾರವು ಈ ಆಚರಣೆ ಮಾಡುವ ಮೂಲಕ ಧೀಮಂತ ವ್ಯಕ್ತಿಗೆ ಗೌರವ ಸಲ್ಲಿಸುತ್ತಿದೆ.