ಶ್ರೀಲಂಕಾ ಪ್ರವಾಸ ಕೈಗೊಡಿದ್ದ ಜೆಡಿಎಸ್‍ನ ಏಳು ಮಂದಿ ನಾಪತ್ತೆ

ಬೆಂಗಳೂರು, ಏ.22-ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್‍ನ 7 ಮಂದಿ ಮುಖಂಡರು ನಾಪತ್ತೆಯಾಗಿದ್ದು, ಅವರ ಶೀಘ್ರ ಪತ್ತೆಗೆ ಕ್ರಮಕೈಗೊಳ್ಳುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ ಎಂದು ಜೆಡಿಎಸ್ ಶಾಸಕ ಆರ್.ಮಂಜುನಾಥ್ ತಿಳಿಸಿದ್ದಾರೆ.

ದಾಸರಹಳ್ಳಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಗುತ್ತಿಗೆದಾರರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು.ಇವರೆಲ್ಲರೂ ಹತ್ತಿರದ ರಕ್ತಸಂಬಂಧಿಗಳಾಗಿದ್ದಾರೆ. ನಿನ್ನೆ ನಡೆದ ಬಾಂಬ್ ಸ್ಫೋಟದ ನಂತರ ನಾಪತ್ತೆಯಾಗಿರುವ ಮಾಹಿತಿ ಇದ್ದು, ಅವರ ಪತ್ತೆಗಾಗಿ ದೇವೇಗೌಡರು ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಶ್ರೀಲಂಕಾದಲ್ಲಿನ ಹೈಕಮೀಷನರ್ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಾಪತ್ತೆಯಾದವರ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.

ಮೂವರು ಮೃತ:
ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಏಳು ಮಂದಿ ಜೆಡಿಎಸ್ ಮುಖಂಡರ ಪೈಕಿ ಮೂವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಹನುಮಂತರಾಯಪ್ಪ, ರಂಗಪ್ಪ, ಲಕ್ಷ್ಮೀನಾರಾಯಣ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ ನಾಲ್ವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ