ಬೆಂಗಳೂರು: ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜನ ಜೆಡಿಎಸ್ ಮುಖಂಡರು , ಬಾಂಬ್ ದಾಳಿ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಇದರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿ ಗ್ರಾಮದ ಮಾರೇಗೌಡ, ಹಾರೋಕ್ಯಾತನಹಳ್ಳಿಯ ಪುಟ್ಟರಾಜು, ನೆಲಮಂಗಲ ತಾಲೂಕಿನ ಹೋವೇನಹಳ್ಳಿಯ ಶಿವಣ್ಣ, ಕಾಚನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣ, ಬೆಂಗಳೂರು 8ನೇ ಮೈಲಿಯ ಹನುಮಂತರಾಯಪ್ಪ, ದಾಸರಹಳ್ಳಿ ನಿವಾಸಿ ರಂಗಪ್ಪ ಮತ್ತು ತುಮಕೂರಿನ ರಮೇಶ್ ನಾಪತ್ತೆಯಾದವರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಮತ ಪ್ರಚಾರ ಮುಗಿಸಿದ ಬಳಿಕ ಇವರೆಲ್ಲ ಶ್ರೀಲಂಕಾಗೆ ಪ್ರವಾಸ ಕೈಗೊಂಡಿದ್ದು, ಅಲ್ಲಿಯ ಶಾಂಗ್ರಿಲ್ಲಾ ಹೋಟೆಲ್ನಲ್ಲಿ ತಂಗಿದ್ದರು.
ಆದರೆ, ಶ್ರೀಲಂಕಾದಲ್ಲಿ ನಡೆದ ಭೀಕರ ಬಾಂಬ್ ದಾಳಿ ಬಳಿಕ ಈ ಏಳು ಜನರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲವಾಗಿದ್ದು, ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಬಾಂಬ್ ದಾಳಿಯಲ್ಲಿ ಹನುಮಂತರಾಯಪ್ಪ ಮತ್ತು ರಂಗಪ್ಪ ಎಂಬವರು ಸಾವನ್ನಪ್ಪಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 290 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.