ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 29 ಕಡೆಯ ದಿನ

ಬೆಂಗಳೂರು,ಏ.22- ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಹಾಗೂ ಶಾಸಕರಾಗಿದ್ದ ಡಾ.ಉಮೇಶ್ ಜಿ. ಜಾದವ್ ರಾಜೀನಾಮೆಯಿಂದ ಖಾಲಿಯಿ ಇದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ಎಲ್ಲರ ಗಮನಸೆಳೆಯುತ್ತಿದೆ.

ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ವಿಧಾನಸಭೆ ಉಪಚುನಾವಣೆ ನಡೆಯಲಿದ್ದು,ಕೇಂದ್ರ ಚುನಾವಣಾ ಆಯೋಗವು ಪ್ರತ್ಯೇಕವಾಗಿ ಎರಡೂ ಕ್ಷೇತ್ರದ ಚುನಾವಣಾ ದಿನಾಂಕ ಪ್ರಕಟಿಸಿದೆ.

ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29 ಕಡೆಯ ದಿನವಾಗಿದ್ದು, 30 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಮೇ 2 ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

ಮೇ 19ರಂದು ಎರಡೂ ಕ್ಷೇತ್ರಗಳ ಉಪಚುನಾವಣೆ ಮತದಾನ ನಡೆಯಲಿದೆ.ಲೋಕಸಭೆ ಚುನಾವಣೆ ಮತ ಎಣಿಕೆ ದಿನವಾದ ಮೇ 23ರಂದು ಈ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಕುಂದಗೋಳ ಶಾಸಕರು ಹಾಗೂ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದರು.ಕೆಲ ತಿಂಗಳ ಹಿಂದಷ್ಟೇ ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಇವರಿಗೆ ಸಚಿವ ಸ್ಥಾನ ಸಿಕ್ಕಿತ್ತು.

ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಅವರ ರಾಜೀನಾಮೆ ನೀಡಿರುವುದರಿಂದ ತೆರವಾದ ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರಕ್ಕೆ ಉಚುನಾವಣೆ ಘೋಷಣೆ ಮಾಡಲಾಗಿದೆ. ಜಾಧವ್ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಈಗ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಕುಂದಗೋಳದಲ್ಲಿ ಅನುಕಂಪಕ್ಕೆ ಬೆಲೆ ಕುಂದಗೋಳ ಕ್ಷೇತದ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಅನುಕಂಪಕ್ಕೆ ಬೆಲೆ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ.

ಹಾಗಾಗಿ ಸಿ.ಎಸ್. ಶಿವಳ್ಳಿ ಕುಟುಂಬದವರಿಗೆ ಟಿಕೆಟ್ ನೀಡಲು ಯೋಜನೆ ರೂಪಿಸಿದ್ದು, ಅನುಕಂಪದ ಅಲೆ ಪಡೆದು ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರ ಹೆಣೆದಿದೆ.

ಶಿವಳ್ಳಿ ಪತ್ನಿ ಕುಸುಮ ಇಲ್ಲವೇ ಪುತ್ರ ಅಮರಶಿವ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಬಹುತೇಕ ಪತ್ನಿ ಕುಸುಮ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತದಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಶಿವಳ್ಳಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ ಸಿದ್ದನಗೌಡ ಈಶ್ವರ ಗೌಡರನ್ನು 634 ಮತಗಳ ಅಂತರದಿಂದ ಸೋಲಿಸಿದ್ದರು.

2013ರಲ್ಲಿ ಕೂಡ ಶಿವಳ್ಳಿ ಅವರೇ ಗೆಲುವು ಸಾಧಿಸಿದ್ದರು.2008ರಲ್ಲಿ ಈಶ್ವರಗೌಡ ಶಿವಳ್ಳಿ ವಿರುದ್ಧ ಗೆದ್ದಿದ್ದರು.ಈ ಬಾರಿ ಕೂಡ ಬಿಜೆಪಿಯಿಂದ ಈಶ್ವರಗೌಡರೇ ಅಭ್ಯರ್ಥಿಯಾಗುವುದು ಪಕ್ಕಾ ಆಗಿದೆ.

ಜಾದವ್‍ಗೆ ಯಾರು ಪರ್ಯಾಯ:
ಇನ್ನು ಕಲಬುರುಗಿಯ ಚಿಂಚೊಳ್ಳಿ ಕ್ಷೇತ್ರ ಹಿಂದೆ ಬಿಜೆಪಿಗೆ ನೆಲೆ ನೀಡಿತ್ತು.2018ರಲ್ಲಿ ಡಾ.ಉಮೇಶ್ ಜಾದವ್ ಗೆದ್ದಿದ್ದರೆ, ಇವರ ವಿರುದ್ಧ ಸ್ಪರ್ಧಿಸಿ ಸೋತಿದ್ದು ಬಿಜೆಪಿಯ ಸುನೀಲ್ ವಲ್ಯಾಪುರೆ.

2018 ಮತ್ತು 2013ರಲ್ಲಿ ಸುನೀಲ್ ವಲ್ಯಾಪುರೆ ಅವರು ಉಮೇಶ್ ಜಾದವ್ ವಿರುದ್ಧ ಸೋತಿದ್ದರು.2008ರಲ್ಲಿ ಕಾಂಗ್ರೆಸ್‍ನ ಬಾಬುರಾವ್ ಚವ್ಹಾಣ್ ವಿರುದ್ಧ ಸುನೀಲ್ ವಲ್ಯಾಪುರೆ ಗೆದ್ದಿದ್ದರು. 1994, 1999 ಮತ್ತು 2004ರಲ್ಲಿ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಸದ್ಯ ಬಿಜೆಪಿ ಸೇರಿರುವ ಉಮೇಶ್ ಜಾದವ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ, ಇತ್ತೀಚೆಗೆ ಕಾಂಗ್ರೆಸ್‍ಗೆ ಮರು ಸೇರ್ಪಡೆಗೊಂಡಿರುವ ಬಾಬುರಾವ್ ಚವ್ಹಾಣ್‍ಗೆ ಸೇರಿ ಲೋಕಸಭೆಗೆ ಸ್ಪರ್ಧಿಸಿರುವ ಉಮೇಶ್ ಜಾಧವ್ ಬದಲು ಇತ್ತೀಚೆಗೆ ಕಾಂಗ್ರೆಸ್‍ಗೆ ಮರು ಸೇರ್ಪಡೆಯಾಗಿರುವ ಬಾಬುರಾವ್ ಚವ್ಹಾಣ್‍ಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆ ಇದೆ.

ಇನ್ನೊಂದೆಡೆ ಬಿಜೆಪಿ ಮತ್ತೆ ಸುನೀಲ್ ವಲ್ಯಾಪುರೆಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ