ಕೊಲಂಬೋ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಹನುಮಂತರಾಯಪ್ಪ-ಅವರ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಏ.22- ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವ ಇಬ್ಬರು ಕನ್ನಡಿಗರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂಬುವರು ಘಟನೆಯಲ್ಲಿ ಸಾವನ್ನಪ್ಪಿರುವುದು ಖಚಿತವಾಗಿದೆ. ಪುಟ್ಟರಾಜು, ಮಾರೇಗೌಡ, ಲಕ್ಷ್ಮಿನಾರಾಯಣ ಮತ್ತು ರಮೇಶ್ ಎಂಬುವರು ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.ದೇವರ ದಯೆಯಿಂದ ಬದುಕಿ ಬರಲಿ ಎಂದು ಅವರು ಪ್ರಾರ್ಥಿಸಿದರು.

ಕೊಲಂಬೋದಲ್ಲಿ ಬಾಂಬ್ ಸ್ಫೋಟಕ್ಕೆ ಸಾವನ್ನಪ್ಪಿರುವ ದಾಸರಹಳ್ಳಿಯ ಹನುಮಂತರಾಯಪ್ಪನವರ ನಿವಾಸಕ್ಕೆ ಇಂದು ಭೇಟಿ ನೀಡಿ ಸಾಂತ್ವಾನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜಿ.ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂಬುವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹಗಳನ್ನು ತಾಯ್ನಾಡಿಗೆ ತರುವ ಬಗ್ಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಜೊತೆ ನಾನೇ ಮಾತನಾಡಿದ್ದೇನೆ. ಅಲ್ಲದೆ ಶ್ರೀಲಂಕಾದಲ್ಲಿರುವ ಭಾರತದ ಹೈಕಮೀಷನರ್‍ಗೂ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಮೃತ ದೇಹಗಳು ಸಿಕ್ಕ ತಕ್ಷಣವೇ ತಾಯ್ನಾಡಿಗೆ ಕಳುಹಿಸಿ ಕೊಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು.ಘಟನೆಯಲ್ಲಿ ಸಾವನ್ನಪ್ಪಿರುವವರ ಮಾಹಿತಿಗಳನ್ನು ಕಲೆ ಹಾಕಿ ಶ್ರೀಲಂಕಾ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ಹೈಕಮೀಷನರ್ ತಿಳಿಸಿದ್ದಾರೆ.

ಕೆಲವು ಪ್ರಕ್ರಿಯೆಗಳು ಮುಗಿದ ನಂತರ ನಾಳೆ ಸಂಜೆಯೊಳಗೆ ಬೆಂಗಳೂರಿಗೆ ಮೃತದೇಹಗಳು ಬರುವ ನಿರೀಕ್ಷೆ ಇದೆ ಎಂದರು.

ಕಾಣೆಯಾಗಿರುವವರ ಬಗ್ಗೆಯೂ ಮಾಹಿತಿ ಕಲೆ ಹಾಕುವಂತೆ ಹೈಕಮೀಷನ್ ಕಚೇರಿಗೆ ಮನವಿ ಮಾಡಿದ್ದೇವೆ. ಹೋಟೆಲ್‍ನಿಂದ ಹೊರಹೋದ ನಂತರ ಹಿಂದಿರುಗಿ ಬಂದಿಲ್ಲ ಎಂಬ ಮಾಹಿತಿ ಬಂದಿದೆ.ಇಂದು ಸಂಜೆಯೊಳಗೆ ಅವರ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಡಿವಿಎಸ್ ತಿಳಿಸಿದರು.

ಇದೊಂದು ಅತ್ಯಂತ ಹೇಯ ಕೃತ್ಯ. ಘಟನೆಯಲ್ಲಿ ಸಾವನ್ನಪ್ಪಿದವರು ಬದುಕಿ ಬರಲು ಸಾದ್ಯವಿಲ್ಲ. ಕಡೆಪಕ್ಷ ಕಾಣೆಯಾದವರು ಸುರಕ್ಷಿತವಾಗಿ ಹಿಂದಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಭಗವಂತ ಮೃತಪಟ್ಟವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಲಂಕಾದಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಪ್ರಧಾನಿ ಕೂಡ ವಿಶೇಷ ಕಾಳಜಿ ವಹಿಸಿದ್ದಾರೆ.ಅಲ್ಲಿನ ಹೈಕಮೀಷನರ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರ ಜೊತೆ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದಾರೆ.ಭಾರತೀಯರ ಸುರಕ್ಷತೆ ಕುರಿತಂತೆ ಶ್ರೀಲಂಕಾ ಸರ್ಕಾರದ ಜೊತೆ ಸಂಪರ್ಕ ಸಾಧಿಸಿದ್ದಾರೆ.ಯಾರೂ ಕೂಡ ಗಾಳಿ ಸುದ್ದಿಗೆ ಕಿವಿಗೊಡಬಾರದೆಂದು ಮನವಿ ಮಾಡಿಕೊಂಡರು.

ಈ ವೇಳೆ ಮಾಜಿ ಶಾಸಕ ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ