ಮಂಡ್ಯ, ಏ.21-ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಗರಾಗಿ ದುಡಿದವರನ್ನೇ ಟಾರ್ಗೆಟ್ ಮಾಡಿಕೊಂಡು ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ದೂರು ನೀಡುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜನರ ಜತೆ ಇರಲು ನಾನು ಬಂದಿದ್ದೇನೆ. ಕೇವಲ ರಾಜಕೀಯ ಮಾಡಲು ಬಂದಿಲ್ಲ. ಆದರೆ ನನ್ನ ಪರವಾಗಿ ನಿಂತವರಿಗೆ ಕಿರುಕುಳ ನೀಡಲಾಗುತ್ತಿದೆ.ಇದು ಸರಿಯಲ್ಲ ಎಂದರು.
ಚುನಾವಣೆ ವೇಳೆ ಏನೇ ಆಗಿದ್ದರೂ ಅದು ಅಲ್ಲಿಗೆ ಮುಗಿಯಬೇಕು. ಆದರೆ ಚುನಾವಣೆ ನಂತರವೂ ಅದನ್ನೇ ಮುಂದುವರೆಸಿದ್ದಾರೆ.ಅವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ.
ಈ ಬಗ್ಗೆ ಎಸ್ಪಿಗೆ ದೂರು ನೀಡುತ್ತೇನೆ ಎಂದರು.
ಪ್ರಜ್ಞಾವಂತರಾಗಿ ಮತ ಚಲಾಯಿಸಿದ ಎಲ್ಲರಿಗೂ ನಾನು ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ನನ್ನ ಗೆಲುವಿಗಾಗಿ ಹಲವರು ನನ್ನ ಬೆಂಬಲವಾಗಿ ನಿಂತು, ಚುನಾವಣೆಯಲ್ಲಿ ದುಡಿದಿದ್ದಾರೆ. ಬೆನಕ ಪ್ರಸಾದ್ ಎಂಬುವರು ಕೆ.ಆರ್.ನಗರದಿಂದ 7 ಕಿ.ಮೀ. ದೂರದವರೆಗೂ ಉರುಳುಸೇವೆ ಮಾಡಿ ನನ್ನ ಗೆಲುವಿಗಾಗಿ ಹರಕೆ ಹೊತ್ತಿದ್ದಾರೆ. ಅದೇ ರೀತಿ ನನ್ನ ಜಿಲ್ಲೆ ನನ್ನ ಸ್ವಾಭಿಮಾನ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯ ನಡೆಸುವಾಗ ಅಚಲವಾಗಿ ನಿಂತು ನನ್ನನ್ನು ಬೆಂಬಲಿಸಿದ ಡಾ.ಎಚ್.ಎನ್.ರವೀಂದ್ರ ಅವರಿಗೆ ಪಕ್ಷದಿಂದ ಹೊರಬಿದ್ದ ಬ್ಲಾಕ್ ಕಾಂಗ್ರೆಸ್ನ 7 ಮಂದಿ, ಅಪಾರ ಬೆಂಬಲ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಪರೋಕ್ಷವಾಗಿ ಬೆಂಬಲಿಸಿದ ಕೆಲ ರಾಜಕೀಯ ಮುಖಂಡರು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಋಣಾತ್ಮಕ ಅಂಶಗಳೇ ಹೆಚ್ಚಾಗಿದ್ದರೂ ಚುನಾವಣೆಯನ್ನು ಧನಾತ್ಮಕವಾಗಿಸಿ ನನ್ನ ಪರ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಸ್ಪಷ್ಟನೆ ನೀಡಲಿ ಸಿಎಂ:
ಚಿತ್ರನಟರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಈ ಮಾತಿನ ಅರ್ಥವೇನು ಎಂಬುದನ್ನು ಅವರೇ ಹೇಳಬೇಕು ಎಂದರು.
ನಾನೀಗ ಸಿಂಗಾಪೂರ್ನಲ್ಲೇ ಇದ್ದೇನೆ. ನಮಗೆ ಮಂಡ್ಯಾನೆ ಸಿಂಗಾಪೂರ್ ಎಂದು ಸಿಎಂ ಹೇಳಿಕೆಗೆ ಟಾಂಗ್ ನೀಡಿದರು.
ಇದೇ ವೇಳೆ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮೇ 29 ರಂದು ಮಂಡ್ಯದಲ್ಲೇ ಆಚರಿಸುವುದಾಗಿ ಪ್ರಕಟಿಸಿದರು.