ಹಾಸನ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಅಧಿಕ ಮತದಾನ

ಹಾಸನ, ಏ.21-ಲೋಕ ಸಮರ ಈಗಾಲೇ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಹಣೆ ಬರಹ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ.ಮೇ.23 ರವರೆಗೆ ಅಭ್ಯರ್ಥಿಗಳು ಪ್ರಸವ ವೇದನೆಯಂತೆ ಕಾಯಬೇಕಿದೆ.

ಹಾಸನ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇಕಡ 77.08 ಮತದಾನವಾಗಿದೆ.

ಜೆಡಿಎಸ್ ಭದ್ರಕೋಟೆಯಲ್ಲಿ ಪ್ರತಿ ಬಾರಿಯೂ ಕಾಂಗ್ರೆಸ್ ಪ್ರಬಲ ಸ್ಪರ್ಧೆ ವೊಡ್ಡುತ್ತಿತ್ತು .ಆದರೆ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಪ್ರಬಲ ಸ್ಪರ್ಧೆವೊಡ್ಡಿದ್ದರಿಂದ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

ಒಂದೆಡೆ ಗೆಲುವಿನ ಲೆಕ್ಕಾಚಾರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು,ಕಾರ್ಯಕರ್ತರು, ಮುಖಂಡರು ತೊಡಗಿದ್ದರೆ ಮತ್ತೊಂದೆಡೆ ಜೆಡಿಎಸ್ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಬೆಟ್ಟಿಂಗ್ ಭರಾಟೆಯೂ ಜೋರಾಗೇ ಸದ್ದು ಮಾಡುತ್ತಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಅವರು ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆವೊಡ್ಡಿದ್ದ ಮಾಜಿ ಸಚಿವ ಎ.ಮಂಜು ಸ್ಪರ್ಧೆಯಿಂದ ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ರಾಜ್ಯವೇ ತಿರುಗಿ ನೋಡುವಂತಾಗಿದೆ.

ಕಳೆದ 25 ವರ್ಷಗಳಿಂದಲೂ ಹಾಸನ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಜೆಡಿಎಸ್‍ನಿಂದ ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್‍ನವರದೇ ವಿಜಯಮಾಲೆ ಎಂದು ಸುಲಭವಾಗಿ ಹೇಳುತ್ತಿದ್ದ ಜನತೆ ಈ ಬಾರಿ ಹಾಸನದಿಂದ ದೆಹಲಿಯ ಪಾರ್ಲಿಮೆಂಟ್‍ಗೆ ಹೋಗುವವರು ಯಾರು ಎಂದು ಸುಲಭವಾಗಿ ಊಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರ ಪ್ರದೇಶದಲ್ಲಿ ಬಿಜೆಪಿಗೆ ಆಯ್ದ ತಾಲೂಕಿನಲ್ಲಿ ಹೆಚ್ಚಿನ ಮತದಾನವಾಗಿರಬಹುದು, ಕಾಂಗ್ರೆಸ್‍ನ ಅತೃಪ್ತರ ಮತ ಜಮೆ ಆಗಿರಬಹುದು.ಮೋದಿ ಅಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ ಎಂಬುದು ಕಮಲ ಪಕ್ಷದ ಲೆಕ್ಕಾಚಾರವಾದರೆ, ಜೆಡಿಎಸ್ ಭದ್ರಕೋಟೆಯಲ್ಲಿ ಆರು ಶಾಸಕರ ಬಲದಿಂದ ಪ್ರಜ್ವಲ್ ರೇವಣ್ಣ ಗೆದ್ದೇ ಗೆಲ್ಲುತ್ತಾರೆ ಎಂಬ ವಾದವೂ ಗಟ್ಟಿಯಾಗಿಯೇ ಕೇಳಿಬರುತ್ತಿದೆ.

ಬೇಲೂರು,ಅರಸೀಕೆರೆ, ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಹೆಚ್ಚಿನ ಮತಗಳು ಬರಲಿದೆ ಎಂಬ ಲೆಕ್ಕಾಚಾರ ಚುನಾವಣಾ ಪೂರ್ವವೂ ಇತ್ತು. ಅದರಂತೆ ಮತದಾನವಾಗಿದೆ ಎಂದು ಸ್ವತಃ ಎಚ್.ಡಿ.ರೇವಣ್ಣ ಹೇಳಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಪ್ರಜ್ವಲ್ ಗೆಲುವು ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ಭವಿಷ್ಯ ನುಡಿದಿದ್ದಾರೆ.

ಈ ಬಾರಿ ಕಾಂಗ್ರೆಸ್ ತೊರೆದು ಬಂದ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಮತಗಳು ಹಾಗೂ ಜೆಡಿಎಸ್ ವಿರುದ್ಧದ ಮತ ಸೇರಿದರೆ ನಮ್ಮ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಜು ಅವರ ವಾದವಾಗಿದೆ.ಅಲ್ಲದೆ ಹೊಸದಾಗಿ 80 ಸಾವಿರ ಯುವ ಮತದಾರರು ಬಿಜೆಪಿ ಪರ ಮತಚಲಾಯಿಸಿದ್ದಾರೆ ಆದ್ದರಿಂದ ಹೆಚ್ಚು ಮತಗಳ ಅಂತರದಿಂದ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಹಲವು ದಶಕದಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಲು ಯಾವುದೇ ಅವಕಾಶವಿರಲಿಲ್ಲ, ಆದರೆ ಬದಲಾದ ರಾಜಕೀಯ ಸನ್ನಿವೇಶ, ಗೌಡರ ವಲಸೆ, ಮೈತ್ರಿ ಧರ್ಮ ಪಾಲನೆ, ಮೋದಿ ಅಲೆ ಇವೆಲ್ಲಾ ಕಾರಣದಿಂದ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದೆ. ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನು ಮೇ.23 ರವರೆಗೆ ಕಾಯಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ