ಏ.23ರಂದು ರಾಜ್ಯದಲ್ಲಿ 2ನೇ ಹಂತದ ಚುನಾವಣೆ-ಹಲವು ಮುಖಂಡರ ಭವಿಷ್ಯ ನಿರ್ಧಾರ

ಬೆಂಗಳೂರು, ಏ.21-ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸಚಿವರಾದ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಲೋಕಸಭೆಗೆ ಏ.23 ರಂದು ಚುನಾವಣೆ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸುಮಾರು 45 ಸಾವಿರ ಪೊಲೀಸರು ಮತ್ತು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದೆ.

ಒಟ್ಟು 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 28,028 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 5,674 ಸೂಕ್ಷ್ಮ, 22,354 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಆಯೋಗ ಒಟ್ಟು 90,997 ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಎರಡನೇ ಹಂತದ ಚುನಾವಣಾ ಕರ್ತವ್ಯಕ್ಕಾಗಿ 1531 ವಲಯ ಸಂಚಾರಿ ಗಸ್ತು ವಾಹನಗಳು, 337 ವಲಯ ಮೇಲುಸ್ತುವಾರಿ ಸಂಚಾರಿ ಗಸ್ತು, 125 ಬಿಎಸ್‍ಪಿ ಸಂಚಾರಿ ಗಸ್ತು, 382 ಸಂಚಾರಿ ತಂಡಗಳು, 384 ಸ್ಥಿರ ಕಣ್ಗಾವಲು ತಂಡಗಳು, 5 ಸಿಆರ್‍ಪಿಎಫ್ ಪಡೆಗಳು, ಸೂಕ್ಷ್ಮ ಮತಗಟ್ಟೆಗಳಿಗೆ 912 ಸಿಆರ್‍ಪಿಎಫ್‍ನ ಅರ್ಧ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಗಾಗಿ 143 ಕೆಎಆರ್‍ಪಿ, 340 ಡಿಎಆರ್, ಸಿಎಆರ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಸೂಕ್ಷ್ಮ ಮತಗಟ್ಟೆಗಳಿಗೆ ಹೆಡ್‍ಕಾನ್‍ಸ್ಟೆಬಲ್ ಹಾಗೂ ಹೋಂಗಾಡ್ರ್ಸ್, ಸಾಮಾನ್ಯ ಮತಗಟ್ಟೆ ಕಾನ್‍ಸ್ಟೆಬಲ್ ಅಥವಾ ಹೋಂಗಾಡ್ರ್ಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಸೆಕ್ಟರ್ ಮೊಬೈಲ್ ದಳಕ್ಕೆ ಪಿಎಸ್‍ಐ ಅಥವಾ ಎಎಸ್‍ಐ ಜೊತೆಯಲ್ಲಿ ಕಾನ್‍ಸ್ಟೆಬಲ್ ಅಥವಾ ಹೆಡ್‍ಕಾನ್‍ಸ್ಟೆಬಲ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿಯನ್ನು ಒದಗಿಸಲಾಗಿದೆ.

ಯಾರೂ ಗುಂಪು ಸೇರದಂತೆ ಮುನ್ನಚ್ಚರಿಕೆ ವಹಿಸಲು ರಚಿಸಲಾಗಿರುವ ಮೇಲುಸ್ತುವಾರಿ ದಳದಲ್ಲಿ ಪಿಎಸ್‍ಐ, ಹೆಡ್‍ಕಾನ್‍ಸ್ಟೆಬಲ್, ಹೋಂಗಾರ್ಡ್ ಕಾರ್ಯನಿರ್ವಹಿಸುತ್ತಾರೆ. ಡಿವೈಎಸ್‍ಪಿ ನೇತೃತ್ವದಲ್ಲಿ ಉಪವಿಭಾಗ ಸಂಚಾರಿ ದಳಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ದಳಗಳನ್ನು ವ್ಯವಸ್ಥೆ ಮಾಡಲಾಗಿದೆ.

ಅದರಲ್ಲಿ ಡಿವೈಎಸ್‍ಪಿ, ಹೆಡ್‍ಕಾನ್‍ಸ್ಟೆಬಲ್, ಹೋಂಗಾರ್ಡ್ ಕೆಲಸ ನಿರ್ವಹಿಸುತ್ತಾರೆ. ಚೆಕ್‍ಪೋಸ್ಟ್ಗಳಲ್ಲಿ ಕಾನ್‍ಸ್ಟೆಬಲ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿ, ಫ್ಲೈಯಿಂಗ್ ಸ್ಕ್ವಾಡ್‍ನಲ್ಲಿ ಹೆಡ್‍ಕಾನ್‍ಸ್ಟೆಬಲ್, ಗೃಹರಕ್ಷಕದಳದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಶಿವಮೊಗ್ಗ ಲೋಕಸಭೆಗಳಿಗೆ ನಾಳೆ ಮತದಾನ ನಡೆಯಲಿದೆ.

ಸರಿಸುಮಾರು 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ. ಅವುಗಳಲ್ಲಿ ಶಿವಮೊಗ್ಗ, ಕಲಬುರಗಿ, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ, ಬಳ್ಳಾರಿ, ಬೆಳಗಾವಿ ಹೈವೋಲ್ಟೇಜ್ ಕ್ಷೇತ್ರಗಳಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ