ವಿಧಾನಸಭಾ ಉಪಚುನಾವಣೆ ಕಾಂಗ್ರೇಸ್ ಅಭ್ಯರ್ಥಿಗಳ ಆಯ್ಕೆ-ಚಿಂಚೋಳಿ ಕ್ಷೇತ್ರದಿಂದ ಕೆ.ಬಿ.ಶಾಣಪ್ಪ-ಕುಂದಗೋಳದಿಂದ ಶಿವಳ್ಳಿಯವರ ಪತ್ನಿ ಕುಸುಮಾ ಕಣಕ್ಕೆ

ಬೆಂಗಳೂರು, ಏ.21- ಮೇ 19ರಂದು ನಡೆಯುವ ವಿಧಾನಸಭೆಯ ಉಪ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಕೆ.ಬಿ.ಶಾಣಪ್ಪ, ಕುಂದಗೋಳದಿಂದ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.

ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಕೆ.ಬಿ.ಶಾಣಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರ ನಡೆಸಿದ್ದರು.

ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಉಮೇಶ್ ಜಾಧವ್ ಅವರ ಸ್ಥಾನ ತುಂಬಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಶಾಣಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮುಂದಾಗಿದೆ.

ಕಾಂಗ್ರೆಸ್‍ನಿಂದ ಗೆದ್ದು ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಇತ್ತೀಚಿಗೆ ಅಕಾಲಿಕ ನಿಧನಕ್ಕೀಡಾದರು.ಈ ಕ್ಷೇತ್ರಕ್ಕೆ ಶಿವಳ್ಳಿ ಅವರ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿ ಅನುಕುಂಪದ ಅಲೆಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಕಳೆದ ಕುಂದಗೋಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಚಿಕ್ಕನಗೌಡರ ಸಿದ್ದನಗೌಡರ ಈಶ್ವರಗೌಡ ಅವರು ಸ್ಪರ್ಧಿಸಿ ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದರು.

ಶಿವಳ್ಳಿ 64,871 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಸಿ.ಎಸ್.ಈಶ್ವರಗೌಡ 64,237 ಮತ ಪಡೆದಿದ್ದರು.ಜೆಡಿಎಸ್‍ನ ಅಕ್ಕಿಮಲ್ಲಿಕಾರ್ಜುನ ಸದಾಶಿವಪ್ಪ ಅವರು 6289 ಮತ ಪಡೆದಿದ್ದರು.

ರಾಜ್ಯ ಸರ್ಕಾರದ ಮಟ್ಟಿಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆ ಅಳಿವು- ಉಳಿವಿನ ಪ್ರಶ್ನೆ ಎಂದೇ ಹೇಳಲಾಗುತ್ತಿದೆ. ಚಿಂಚೋಳಿಯಿಂದ ಎರಡನೇ ಬಾರಿ ಕಣಕ್ಕಿಳಿದಿದ್ದ ಡಾ.ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಜಯಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಸುನಿಲ್ ವಲ್ಲ್ಯಾಪುರೆ 54,693 ಮತಗಳನ್ನು ಪಡೆದಿದ್ದರು. ಇಲ್ಲಿ ಜೆಡಿಎಸ್ ನಗಣ್ಯವಾಗಿತ್ತು.

ರಾಜಕೀಯ ಬೆಳವಣಿಗೆಯಲ್ಲಿ ಉಮೇಶ್ ಜಾಧವ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿ ಬಿಜೆಪಿ ಜತೆ ಗುರುತಿಸಿಕೊಂಡರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದಾರೆ.

ಒಂದು ವೇಳೆ ಉಮೇಶ್ ಜಾಧವ್ ಲೋಕಸಭೆಯಲ್ಲಿ ಗೆದ್ದಿದ್ದೇ ಆದರೆ, ವಿಧಾನಸಭೆ ಉಪ ಚುನಾವಣೆಗೆ ಅವರ ಸಹೋದರ ರಾಮಚಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸುವ ಭರವಸೆ ನೀಡಿದೆ.

ಉಮೇಶ್ ಜಾಧವ್ ಸೋಲು ಕಂಡಿದ್ದೇ ಆದರೆ ಅವರಿಗೆ ರಾಜಕೀಯವಾಗಿ ಅಸ್ಥಿರತೆ ಎದುರಾಗಲಿದೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ನಾಳೆ(ಏ.22)ಯಿಂದ ಆರಂಭಗೊಳ್ಳಲಿದ್ದು, ಏ.29ರವರೆಗೆ ನಡೆಯಲಿದೆ. ಏ.30ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 2 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 19ರಂದು ಉಪ ಚುನಾವಣೆ ನಡೆದು ಮೇ 23ರಂದು ಲೋಕಸಭೆ ಚುನಾವಣೆಯ ಮತ ಎಣಿಕೆಯ ಜತೆಯಲ್ಲೇ ಉಪ ಚುನಾವಣೆಯ ಫಲಿತಾಂಶವೂ ಹೊರ ಬೀಳಲಿದೆ.

ಚಿಂಚೋಳಿ ಕ್ಷೇತ್ರ ಈ ಬಾರಿ ಅತ್ಯಂತ ಪ್ರತಿಷ್ಠಿತ ಕಣವಾಗಿದ್ದು, ಕಾಂಗ್ರೆಸ್‍ನಿಂದ ಕೆ.ವಿ.ಶಾಣಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.ಇತ್ತೀಚೆಗಷ್ಟೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯಲ್ಲಿ ಉಮೇಶ್ ಜಾಧವ್ ಅವರ ಸಹೋದರ ಕಣಕ್ಕಿಳಿಯುತ್ತಾರೋ ಅಥವಾ ಸುನೀಲ್‍ವಲ್ಯಾಪುರೆ ಅವರೇ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ