ಕಲಬುರಗಿ,ಏ.20- ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಕಲಬುರಗಿ ಕ್ಷೇತ್ರದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ, ಗುಲ್ಬರ್ಗ ಲೋಕಸಭಾ ಅಭ್ಯರ್ಥಿ ಉಮೇಶ್ ಜಾಧವ್ ಸಮಾವೇಶವೊಂದರಲ್ಲಿ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರಿಗೆ, ನಿಮ್ಮ ಪಕ್ಷ ನನಗೆ ಇನ್ನೂ ಸೆಟ್ ಆಗ್ತಿಲ್ಲ. ನೀವೇ ನನ್ನ ಕೈ ಹಿಡಿಯಬೇಕೆಂದು ಹೇಳುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕಲಬುರಗಿಯಲ್ಲಿನಡೆದ ಎಸ್ಸಿ ಸಮಾವೇಶದಲ್ಲಿ ಮಾತನಾಡಿದ ಉಮೇಶ್ ಜಾಧವ್, ನನಗಿನ್ನೂ ಬಿಜೆಪಿ ಸೆಟ್ ಆಗುತ್ತಿಲ್ಲ, ನಿಮ್ಮ ಸಹಕಾರವಿರಬೇಕು ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳಗೆ ಜಾಧವ್ ಮನವಿ ಮಾಡಿದ್ದಾರೆ.
ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷ ಬಿಟ್ಟು ಕಮಲ ಪಾಳೆಯ ಸೇರಿದ ಬಳಿಕ ಬಿಜೆಪಿ ನನಗಿನ್ನೂ ಸೆಟ್ ಆಗುತ್ತಿಲ್ಲ ಎಂದು ಹೇಳುತ್ತಿರುವುದರ ಹಿಂದಿನ ಔಚಿತ್ಯದ ಬಗ್ಗೆ ಎಲ್ಲರಲ್ಲಿ ಕುತೂಹಲ ಉಂಟು ಮಾಡಿದ್ದು, ಚರ್ಚೆಗೀಡು ಮಾಡಿದೆ.
ಈ ಮಾತಿನ ತಾತ್ಪರ್ಯ ಏನು ಅನ್ನೋದು ಬಿಜೆಪಿ ನಾಯಕರಿಗೆ ತಿಳಿಯದಂತ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.ಜಾಧವ್ಗೆ ಸ್ಥಳೀಯ ನಾಯಕರು ಸಹಕರಿಸುತ್ತಿಲ್ಲವೇ ಅಥವಾ ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂದು ಪರೋಕ್ಷವಾಗಿ ಜಾಧವ್ ಹೇಳುತ್ತಿದ್ದಾರೆಯೇ?ಎಂಬ ಪ್ರಶ್ನೆಗಳು ಎದ್ದಿವೆ.
ಒಟ್ಟಾರೆ ವೇದಿಕೆಯಲ್ಲಿ ಸ್ಥಳೀಯ ಘಟಾನುಘಟಿ ನಾಯಕರು ಇರುವಾಗಲೇ, ಪಕ್ಷ ನನಗೆ ಸೆಟ್ ಆಗ್ತಿಲ್ಲ ಎಂಬ ಜಾಧವ್ ಹೇಳಿಕೆ ಸ್ಥಳೀಯ ಬಿಜೆಪಿ ನಾಯಕರು ತಬ್ಬಿಬ್ಬುಗೊಳ್ಳುವಂತೆ ಮಾಡಿರುವುದಂತೂ ಸತ್ಯ.