ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು; ತಪ್ಪಿತು ಭಾರೀ ದುರಂತ

ಕಾನ್ಪುರ: ಹೌರಾ-ನವದೆಹಲಿ ಪೂರ್ವ ಎಕ್ಸ್​ಪ್ರೆಸ್​​ ರೈಲು ಉತ್ತರ ಪ್ರದೇಶದ ಕಾನ್ಪುರ ಸಮೀಪ ಹಳಿ ತಪ್ಪಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

ರೂಮಾ ರೈಲ್ವೆ ನಿಲ್ದಾಣದ ಸಮೀಪ ತಡರಾತ್ರಿ 12.50ರ ಸುಮಾರಿಗೆ ರೈಲು ಹಳಿ ತಪ್ಪಿದೆ. ಹೌರಾದಿಂದ ದೆಹಲಿಗೆ ತೆರಳುತ್ತಿದ್ದ ಈ ರೈಲಿನ 12 ಬೋಗಿಗಳು ನೆಲಕ್ಕುರುಳಿವೆ. ಎಸ್​8, ಎಸ್​​9, ಬಿ1-ಬಿ5, ಎಚ್​​1, ಎ1, ಎ2 ಹಾಗೂ ಲಗೇಜ್​ ತುಂಬುವ ಬೋಗಿ ಹಳಿ ತಪ್ಪಿವೆ.

ಹಳಿ ತಪ್ಪುವ ಸಂದರ್ಭದಲ್ಲಿ ರೈಲು ನಿಧಾನವಾಗಿ ಸಾಗುತ್ತಿದ್ದರಿಂದ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. 13 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೈಲು ಹಳಿ ತಪ್ಪಿರುವುದರಿಂದ ಈ ಭಾಗದಲ್ಲಿ ಬೇರೆ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.  ರೈಲು ಹಳಿ ತಪ್ಪಲು ಕಾರಣವೇನು ಎನ್ನುವ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಈ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.

ಬಿಹಾರದ ರಾಜಧಾನಿ ಪಾಟ್ನಾ ಸಮೀಪ ಇತ್ತೀಚೆಗೆ ಸಂಭಿವಿಸಿದ ರೈಲು ದುರಂತದಲ್ಲಿ 7 ಜನರು ಮೃತಪಟ್ಟಿದ್ದರು. ಸೀಮಾಂಚಲ್​ ಎಕ್ಸ್​ಪ್ರೆಸ್​​ ಬಿಹಾರದ ಜೋಗ್​ಬನಿಯಿಂದ ದೆಹಲಿಯ ಆನಂದ್​​ ವಿಹಾರ್​ಗೆ ತೆರಳುತ್ತಿತ್ತು. ಬೆಳಗ್ಗೆ 4 ಗಂಟೆ ಸುಮಾರಿಗೆ ವೈಶಾಲಿ ಜಿಲ್ಲೆಯ ಸಹದಾಯ್ ಬುಜರ್ಗ್​ನಲ್ಲಿ ರೈಲು ಹಳಿ ತಪ್ಪಿದೆ. ಘಟನೆ ನಡೆಯುವ ಸಂದರ್ಭದಲ್ಲಿ ರೈಲು ಬಹಳ ವೇಗವಾಗಿ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ