ಅಮೇಥಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕುಟುಂಬ ಸಾಂಪ್ರದಾಯಿಕ ಕ್ಷೇತ್ರ ಅಮೇಠಿಯಲ್ಲಿ ಸಲ್ಲಿಸಿರುವ ನಾಮಪತ್ರದ ಪರಿಶೀಲನೆಯನ್ನು ಚುನಾವಣಾಧಿಕಾರಿ ಸೋಮವಾರಕ್ಕೆ ಮುಂದೂಡಿದ್ದಾರೆ. ನಾಮಪತ್ರ ಸಲ್ಲಿಸುವಾಗ ರಾಹುಲ್ ಸಲ್ಲಿಸಿರುವ ಬ್ರಿಟನ್ ಪೌರತ್ವದ ದಾಖಲೆ ಹಾಗೂ ಅವರ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳ ಬಗ್ಗೆ ಅಮೇಠಿಯಲ್ಲಿ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಶಂಕೆ ವ್ಯಕ್ತಪಡಿಸಿರುವುದು ಇದಕ್ಕೆ ಕಾರಣ.
ಅಮೇಠಿಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಧ್ರುವ ಲಾಲ್ ಪರ ವಕೀಲ ರವಿ ಪ್ರಕಾಶ್ ಈ ಮಾಹಿತಿ ನೀಡಿದ್ದಾರೆ. ಬ್ರಿಟನ್ನಲ್ಲಿ ರಾಹುಲ್ ಗಾಂಧಿ ಹೆಸರಿನಲ್ಲಿ ಒಂದು ಕಂಪನಿಯನ್ನು ನೋಂದಣಿ ಮಾಡಿಸಲಾಗಿದೆ. ಅದರಲ್ಲಿ ಅವರು ತಾವು ಬ್ರಿಟನ್ ನಿವಾಸಿ ಎಂದು ಘೋಷಿಸಿದ್ದಾರೆ. ಹಾಗಾಗಿ, ಬ್ರಿಟನ್ ಪೌರತ್ವ ಹೊಂದಿರುವ ಅವರು ವಿದೇಶಿ ಪ್ರಜೆಯಾಗುತ್ತಾರೆ. ಆದ್ದರಿಂದ, ಅವರಿಗೆ ಭಾರತದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ವಿವರಿಸಿದರು.
ಆ ಕಂಪನಿಯ ಚರ ಮತ್ತು ಸ್ಥಿರಾಸ್ತಿ ಕುರಿತು ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿ ಒದಗಿಸಲಾಗಿಲ್ಲ. ನಾಮಪತ್ರದೊಂದಿಗೆ ರಾಹುಲ್ ಸಲ್ಲಿಸಿರುವ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳಲ್ಲೂ ಸಾಕಷ್ಟು ಗೊಂದಲಗಳಿವೆ. ಆದ್ದರಿಂದ, ರಾಹುಲ್ ಗಾಂಧಿ ಅವರಿಗೆ ನಾಮಪತ್ರ ಪರಿಶೀಲನೆ ವೇಲೆ ಶೈಕ್ಷಣಿಕ ಅರ್ಹತೆಯ ಮೂಲ ದಾಖಲೆಗಳನ್ನು ಒದಗಿಸುವಂತೆ ಸೂಚಿಸಬೇಕು. ಅದನ್ನು ಆಧಾರವಾಗಿಟ್ಟುಕೊಂಡು ನಾಮಪತ್ರ ಪರಿಶೀಲಿಸಬೇಕು ಎಂದು ಚುನಾವಣಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದನ್ನು ಆಧರಿಸಿ, ಅವರ ನಾಮಪತ್ರ ಪರಿಶೀಲನೆಯನ್ನು ಚುನಾವಣಾಧಿಕಾರಿ ಸೋಮವಾರಕ್ಕೆ ಮುಂದೂಡಿದ್ದಾಗಿ ಹೇಳಿದರು.