ರಾಯಚೂರು ಇಂಜನಿಯರಿಂಗ್ ವಿದ್ಯಾರ್ಥಿನಿ ನಿಗೂಡ ಸಾವು-ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಏ.20-ರಾಯಚೂರು ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಾಪಕಗೊಳ್ಳುತ್ತಿದ್ದು, ವಿವಿಧ ಸಂಘಟನೆಗಳು ಕೂಡ ನ್ಯಾಯಕ್ಕಾಗಿ ಬೀದಿಗಿಳಿದಿವೆ.

ಸಿವಿಲ್ ಇಂಜಿನಿಯರಿಂಗ್ 5ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಏ.13 ರಿಂದ ಕಾಣೆಯಾಗಿದ್ದು, ಏ.16 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು.

ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತಾದರೂ ವಿದ್ಯಾರ್ಥಿನಿ ದೇಹದ ಮೇಲಾಗಿರುವ ಗಾಯಗಳು ಹಾಗೂ ನೇಣುಬಿಗಿದುಕೊಂಡಿರುವ ಸ್ಥಿತಿ ನೋಡಿ ಅದನ್ನು ಕೊಲೆ ಎಂದು ಶಂಕಿಸಲಾಗಿದೆ. ವಿದ್ಯಾರ್ಥಿನಿ ತಾಯಿ ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸರು ಸುದರ್ಶನ್‍ಯಾದವ್ ಎಂಬ ಯುವಕನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ವಿದ್ಯಾರ್ಥಿನಿಗೆ ನ್ಯಾಯ ಸಿಗುವುದಿಲ್ಲ. ಸಿಬಿಐ ತನಿಖೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಇಲ್ಲಿನ ಹಲವು ಸಂಘಟನೆಗಳು ಒತ್ತಾಯಿಸಿವೆ.

ರಾಯಚೂರಿನ ಶಕ್ತಿ ನಗರದಲ್ಲಿ ಇಂದು ಹಲವು ಸಂಘಟನೆಗಳು ಸಮಾವೇಶಗೊಂಡು ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿವೆ.

ಕ್ರೂರವಾಗಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಗಿದೆ. ಆದರೆ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ಪ್ರಭಾವಿಗಳು ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕುವ ಕುತಂತ್ರ ನಡೆದಿದೆ ಎಂದು ಸಂಘಟನೆಗಳು ಆರೋಪಿಸಿವೆ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ನ್ಯಾಯ ಸಿಗುವ ಸಾಧ್ಯತೆಯಿದೆ ಎಂದು ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಗಣ್ಯರ ಭೇಟಿ:
ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿರುವ ವಿದ್ಯಾರ್ಥಿನಿಯ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ.

ಅದೇ ರೀತಿ ನಟಿ ಹರ್ಷಿಕಾ ಪೂಣಚ್ಚ , ನಟ ಭುವನ್ ಮತ್ತಿತರರು ಕೂಡ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ದಿನೇ ದಿನೇ ಪ್ರಕರಣ ಕಾವು ಪಡೆಯುತ್ತಿದ್ದು, ನಿಷ್ಪಕ್ಷಪಾತ ತನಿಖೆ ನಡೆದು ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವಿಗೆ ನ್ಯಾಯ ಕೇಳಿ ಪ್ರತಿಭಟನೆಗಳು ಆರಂಭಗೊಂಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ