ಭಗವಂತ ಖೂಬಾಗೆ ಲಾಸ್ಟ್ ಎಲೆಕ್ಶನ್

ಬೀದರ್:ಐದು ವರ್ಷಗಳಲ್ಲಿ ಯಾವುದೇ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ಅವರಿಗೆ ಇದು ಕೊನೆ ಚುನಾವಣೆಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ದೂರಿದರು.

ಭಾಲ್ಕಿ ಪಟ್ಟಣದಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಮಾತನಾಡಿ, ಭಗವಂತ ಖೂಬಾ ಅವರಿಂದ ಜಿಲ್ಲೆಯ ಅಭಿವೃಧ್ಧಿ ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಖಚಿತವಾಗಿದೆ. ಬಿಜೆಪಿಯವರ ಬಣ್ಣದ ಮಾತುಗಳಿಗೆ ಮತದಾರರು ಮತ್ತೊಂದು ಬಾರಿ ಮೊಸ ಹೋಗಬಾರದು ಎಂದು ಖಂಡ್ರೆ ಎಚ್ಚರಿಸಿದರು.

 

ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿರುವ ಖೂಬಾ ಹೀನಾಯವಾಗಿ ಸೋಲುವುದು ಖಚಿತವಾಗಿದೆ. ಖೂಬಾ ಪಾಲಿಗೆ ಇದು ಕೊನೆಯ ಚುನಾವಣೆಯಾಗಲಿದೆ. ಗಂಟುಮುಟೆ ಕಟ್ಟಿಕೊಂಡು ಖೂಬಾ ಮನೆಗೆ ಹೋಗಲು ಸಿದ್ಧರಾಗಿ ಎಂದರು.

ಬೀದರ್ ಭಾಲ್ಕಿ ರಸ್ತೆ ಗುಣಮಟ್ಟದ್ದಾಗಿತ್ತು. 10 ಮೀಟರ್ ಅಗಲದ ಸಿಸಿ ರಸ್ತೆ ನಿರ್ಮಿಸುವುದಾಗಿ ಕೇಂದ್ರ ಹೇಳಿತ್ತು. ಜನರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ತಕರಾರು ಎತ್ತಲಿಲ್ಲ. 300 ಕೋಟಿ ರೂ. ವೆಚ್ಚದಲ್ಲಿ 20 ತಿಂಗಳಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳಿಸಬೇಕಿತ್ತು.

ಆದರೆ, ಮೂರು ವರ್ಷ ಕಳೆಯುತ್ತ ಬಂದರೂ ಸಿಸಿ ರಸ್ತೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಕ್ಕಪಕ್ಕದ ಹೊಲಗಳಲ್ಲಿ ಬೆಳೆ ಧೂಳಿನಿಂದ ಹಾಳಾಗಿದೆ. ರಸ್ತೆ ಸಂಚಾರ ಕಷ್ಟಕರವಾಗಿದೆ. ಬೈಕ್ ಬಿದ್ದು ಗಾಯಗೊಳ್ಳುವ ಘಟನೆಗಳು ನಡೆಯುತ್ತಲೇ ಇವೆ. ಇದೆಲ್ಲವೂ ಖೂಬಾ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.

ಸಿಸಿ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿಲ್ಲ. ಜೊತೆಗೆ ನಿರ್ಮಾಣ ಕಾರ್ಯವನ್ನೇ ನಿಲ್ಲಿಸಲಾಗಿದೆ. ಅಲ್ಲೊಂದು ಕಿಮೀ, ಇಲ್ಲೊಂದು ಕಿ.ಮೀ. ನಿರ್ಮಿಸಲಾಗಿದೆ. ಇದೇನಾ ಖೂಬಾ ಕೊಡುಗೆ ಎಂದು ಖಂಡ್ರೆಯವರು ಹರಿಹಾಯ್ದರು.

2017-18 ನೇ ಸಾಲಿನ ಮುಂಗಾರುಹಂಗಾಮಿನಲ್ಲಿ ನಾಲ್ಕೇ ತಿಂಗಳಲ್ಲಿ ವಿಮೆ ಕಂಪೆನಿಗೆ ಬೀದರ್ ಜಿಲ್ಲೆಯೊಂದರಿಂದಲೇ 185 ಕೋಟಿ ರೂ. ಲಾಭ ಆಗಿದೆ. 14.60 ಕೋಟಿ ರೂ. ವಿಮಾ ಕಂತು ಪಾವತಿಸಿದ ರೈತರಿಗೆ ಬರೀ 95 ಲಕ್ಷ ರೂ. ಪರಿಹಾರ ಸಿಕ್ಕಿದೆ ಎಂದು ಆರೋಪಿಸಿದರು.

ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಫಸಲ್ ಬಿಮಾ ಯೋಜನೆ ಬಗ್ಗೆ ಭಗವಂತ ಖುಬಾ ಮೌನವಾಗಿದ್ದಾರೆ. ಈ ಯೋಜನೆಯಲ್ಲಿನ ಲೋಪದೋಷಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮುಖ್ಯಮಂತ್ರಿಯವರು ಹೊಸ ವಿಮಾ ಯೋಜನೆ ಘೋಷಿಸಿದ್ದಾರೆ. ರೈತರಿಗೆ ಅನುಕೂಲವಾಗುವಂಥ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಪ್ರಮುಖರಾದ ಶಿವರಾಜ ಹಾಸನಕರ್, ಮುಸ್ತಾಕ ಅಹೆಮದ, ಹಣಮಂತರಾವ ಚವ್ಹಾಣ, ಶಿವಶರಣಪ್ಪ ಛತ್ರೆ, ಸೋಮನಾಥ ಅಷ್ಟೂರೆ, ವಿಲಾಸ ಮೋರೆ, ಸಂತೋಷ ಬಿ.ಜಿ.ಪಾಟೀಲ, ಸಂಗಮೇಶ ಮದಕಟ್ಟಿ, ಪಪ್ಪು ಪಾಟೀಲ್ ಖಾನಾಪರ, ಮಹಾದೇವ ಸ್ವಾಮಿ, ಅನೀಲ ಲಖೊಂಡೆ ಸೇರಿದಂತೆ ಮತ್ತಿತರ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
————–

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ