ಬೆಂಗಳೂರು,ಏ.20-ಲೋಕಸಭೆ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರ ನಾಳೆ ಅಂತ್ಯವಾಗಲಿದ್ದು, ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಇಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಡೆಯ ಕಸರತ್ತು ನಡೆಸಿದರು.
ಬಹಿರಂಗ ಪ್ರಚಾರಕ್ಕೆ ಇನ್ನು 48 ಗಂಟೆ ಬಾಕಿ ಇರುವುದರಿಂದ ಬಿಜೆಪಿ ಹಾಗೂ ದೋಸ್ತಿ ಪಕ್ಷಗಳ ಮುಖಂಡರು ಬಹಿರಂಗ ಸಮಾವೇಶ, ರೋಡ್ ಶೋ, ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಶಿವಮೊಗ್ಗದಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಪರ ಭರ್ಜರಿ ರೋಡ್ ಶೋ ನಡೆಸಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದರು.
ಇನ್ನು ಶಿವಮೊಗ್ಗದಲ್ಲಿ ಈ ಬಾರಿ ಬಿಜೆಪಿಯನ್ನು ಖೆಡ್ಡಾಕ್ಕೆ ಬೀಳಿಸಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ನೇರ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಇದರ ಭಾಗವಾಗಿ ಈವರೆಗೂ ಹಾವು-ಮುಂಗುಸಿಯಂತಿದ್ದ ಭದ್ರಾವತಿಯ ಅಪ್ಪಾಜಿಗೌಡ ಮತ್ತು ಬಿ.ಕೆ.ಸಂಗಮೇಶ್ ಅವರುಗಳನ್ನು ಒಂದು ಮಾಡುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಇಂದು ಶಿವಮೊಗ್ಗದ ಹಲವು ಕಡೆ ಡಿ.ಕೆ.ಶಿವಕುಮಾರ್ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಪರವಾಗಿ ಮತಯಾಚನೆ ಮಾಡಿದರು.
ಕೇಂದ್ರದ ಮತೋರ್ವ ಸಚಿವೆ ಸ್ಮೃತಿ ಇರಾನಿ ವಿಜಾಪುರದಲ್ಲಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ರೋಡ್ ಶೋ ನಡೆಸಿ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಕೋರಿದರು.
ವಿಜಾಪುರದಲ್ಲಿ ದೋಸ್ತಿಗಳ ಅಬ್ಬರ:
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಬಿಜಾಪುರದಲ್ಲಿ ಮೈತ್ರಿ ಅಭ್ಯರ್ಥಿ ಸುನಿತ ಚವ್ಹಾಣ್ ಪರ ಇಂದು ಕುಮಾರಸ್ವಾಮಿ, ಗೌಡರು ಹಾಗೂ ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಿ ಈ ಬಾರಿ ಬಿಜೆಪಿಯನ್ನು ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ವಿಜಾಪುರದ ನಂತರ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಉತ್ತರ ಕನ್ನಡ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಳಗಾವಿಯಲ್ಲಿ ,ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಕಾರವಾರ ಮತ್ತು ಶಿವಮೊಗ್ಗ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಶಿವಮೊಗ್ಗದಲ್ಲಿ ಮತಯಾಚನೆ ಮಾಡಿದರು.
ಪುತ್ರನನ್ನು ಗೆಲ್ಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಕಳೆದ ಎರಡು ದಿನಗಳಿಂದ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿದ್ದಾರೆ.ನಾಳೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವವರೆಗೂ ಪ್ರಚಾರ ಕಾರ್ಯದಲ್ಲಿ ಭರದಿಂದ ಪಾಲ್ಗೊಳ್ಳುತ್ತಿದ್ದಾರೆ.