ವೈಭವಯುತವಾಗಿ ನೆರವೇರಿದ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು,ಏ.20-ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಹುಣ್ಣಿಮೆಯಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಬಹಳ ವೈಭವಯುತವಾಗಿ ನೆರವೇರಿತು.

ಸ್ಥಳೀಯ ಜನತೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಿಂದ ಬಂದಿದ್ದಂತಹ ಸಾವಿರಾರು ಭಕ್ತಾಧಿಗಳು ಕರಗವನ್ನು ಕಣ್ತುಂಬಿಕೊಂಡರು.

ಮಧ್ಯರಾತ್ರಿ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಿತು. ಕರಗ ಹೊತ್ತಿದ್ದಂತಹ ಅರ್ಚಕ ಮನು ಅವರು ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಕರಗ ಹೊತ್ತಿದ್ದ ಮನು ಅವರಿಗೆ ಹರಿಶಿಣ ಬಣ್ಣದ ಸೀರೆಉಡಿಸಿ, ಬಳೆ ತೊಡಿಸಿ ದ್ರೌಪದಿಯಂತೆ ಸಿಂಗಾರ ಮಾಡಲಾಗಿತ್ತು.ಕರಗಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ ಬಣ್ಣಗಳನ್ನು ತುಂಬಿದ್ದು ಎಲ್ಲರ ಗಮನ ಸೆಳೆಯಿತು.

ಅಲ್ಲದೆ ತಳಿರುತೋರಣಗಳಿಂದ ಅಲಂಕಾರ, ಸರ್ವಾಲಂಕಾರ ಭೂಷಿತರಾಗಿದ್ದ ಕರಗಧಾರಿ ಮನು ಅವರು ವೀರಕುಮಾರರೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸಿ ನಂತರ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರ ದಂಡದೊಂದಿಗೆ ದೇವಾಲಯ ಗರ್ಭಗುಡಿಯಿಂದ ಹೊರಗೆ ಬರುತ್ತಿದ್ದಂತೆ ಜೈಕಾರ ಮೊಳಗಿತು.

ತಮಟೆ ವಾದ್ಯಗಳು ಮೊಳಗಿತು ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ… ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿ ನಂತರ ಹಲಸೂರುಪೇಟೆ ಆಂಜನೇಯಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲ ಪೂಜೆ ಸ್ವೀಕರಿಸಿ ನಂತರ ಕರಗ ಮುಂದೆ ಸಾಗಿತು.

ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣ ಗಲ್ಲಿಯ ಭೆರೇದೇವರ ದೇವಸ್ಥಾನ, ಕಬ್ಬನ್‍ಪೇಟೆಯ ರಾಮಸೇನಾ ಮಂದಿರ,ಅರಳಪೇಟೆಯ ಮಸ್ತಾನ್ ಸಾಹೇಬರ ದರ್ಗಾ, ಗಾಣಿಗರ ಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕು ದಿಕ್ಕುಗಳಲ್ಲಿ ಕರಗ ಸಂಚರಿಸಿತು.

ಓಲಗದ ಸದ್ದಿನಲ್ಲಿ ಅಕ್ಕಿಪೇಟೆ, ಅರಳೆಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿ ಸಂಚರಿಸಿ ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ಸೂರ್ಯೋದಯದ ಹೊತ್ತಿಗೆ ಪುನಃ ಕರಗ ಧರ್ಮರಾಯಸ್ವಾಮಿ ದೇವಸ್ಥಾನ ಸೇರಿತು.

ಈ ಸಂದರ್ಭದಲ್ಲಿ ಶಂಖ,ಜಾಗಟೆ ಸದ್ದು ಮೊಳಗಿತು. ಕರಗ ಉತ್ಸವಕ್ಕೆ ಟನ್ ಗಟ್ಟಲೇ ಮಲ್ಲಿಗೆ ಹೂ ಬಳಸಿದ್ದರಿಂದ ಪೇಟೆಬೀದಿಗಳಲ್ಲಿ ಹೂವಿನ ಸುವಾಸನೆ ಹರಡಿತ್ತು.

ಒಟ್ಟಾರೆ ಹೂವಿನ ಕರಗ ಮಹೋತ್ಸವವನ್ನು ಸಹಸ್ರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಮನೆ-ಕಟ್ಟಡಗಳ ಮೇಲೆ ನಿಂತು ಕಣ್ತುಂಬಿಕೊಂಡರು.

ಕರಗ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ