ಬೆಂಗಳೂರು, ಏ.19- ನಿನ್ನೆ ನಡೆದ ಮತದಾನದ ವೇಳೆ ಹಲವು ಕಡೆ ಕೆಲವು ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇದರ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಒಂದೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 50ರಿಂದ 60ಸಾವಿರ ಮತದಾರರನ್ನು ಪಟ್ಟಿಯಿಂದ ದುರುದ್ದೇಶ ಪೂರ್ವಕವಾಗಿಯೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ತೆಗೆದು ಹಾಕಲಾಗಿದೆ. ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಬಹುದು ಎಂಬ ಕಾರಣಕ್ಕಾಗಿಯೇ ಬಿಬಿಎಂಪಿ ಅಧಿಕಾರಿಗಳು, ಇಲ್ಲವೇ ಕಾಣದ ಕೈಗಳು ಈ ಕೃತ್ಯವನ್ನು ಎಸಗಿರಬಹುದು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಸಂಶಯ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿದವರು ಇದ್ದಕ್ಕಿದ್ದಂತೆ ನಿನ್ನೆ ಮತದಾರರ ಪಟ್ಟಿಯಿಂದ ಹೇಗೆತೆಗೆದು ಹಾಕಲಾಯಿತು. ಅವರ ಗುರುತಿನ ಚೀಟಿ, ನಿವಾಸದ ದೃಢೀಕರಣ ಸೇರಿದಂತೆ ಮತದಾನಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಕೈ ಬಿಡಲಾಗಿದೆ. ಪಟ್ಟಿಯಿಂದ ಹೆಸರನ್ನು ಕೈ ಬಿಡಬೇಕಾದರೆ ಮತದಾರರು ಅರ್ಜಿ ಕೊಡಬೇಕು. ಇಲ್ಲವೆ ತೆಗೆದು ಹಾಕಬೇಕಾದರೆ ನೋಟಿಸ್ ನೀಡಬೇಕು. ಈ ಯಾವ ನಿಯಮಗಳನ್ನು ಪಾಲಿಸದೆ ಬಿಜೆಪಿಗೆ ಮತ ಹಾಕಬಾರದು ಎಂಬ ಕಾರಣಕ್ಕಾಗಿಯೇ ಕೆಲವರು ಈ ಕೃತ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮಾರ್ಚ್ 16ರಂದು ಚುನಾವಣಾ ಆಯೋಗದಿಂದ ನೀಡಿದ್ದ ಪಟ್ಟಿಯಲ್ಲಿ ಹೆಸರಿತ್ತು. ನಿನ್ನೆ ಇದ್ದಕ್ಕಿದ್ದಂತೆ ಹೇಗೆ ಹೆಸರನ್ನು ತೆಗೆದು ಹಾಕಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ದೂರದ ಅಮೆರಿಕದಿಂದ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯೊಬ್ಬರ ಹೆಸರನ್ನು ಕೂಡ ಕೈ ಬಿಡಲಾಗಿದೆ. ಇದೇ ರೀತಿ ಮಣಿಪಾಲ್ನ ವಿದ್ಯಾರ್ಥಿಯೊಬ್ಬನ ಹೆಸರನ್ನು ಕೂಡ ಕಿತ್ತು ಹಾಕಲಾಗಿದೆ. ಮತದಾನದ ಹಕ್ಕು ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕೊಲೆ ಮಾಡಿದಂತೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಚುನಾವಣಾ ಆಯೋಗಕ್ಕೂ ಇದರ ಬಗ್ಗೆ ದೂರು ನೀಡಲಾಗಿದೆ. ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪ್ರತಿ ಚುನಾವಣೆಯಲ್ಲೂ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಶಾಶ್ವತ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಿನ್ನೆ ನಡೆದ ಮತದಾನದ ವೇಳೆ ಮತದಾರರು ಉತ್ಸುಕತೆಯಿಂದ ಬಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. 14 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಎರಡನೆ ಹಂತದ ಚುನಾವಣೆ ವೇಳೆಯೂ ನಾವು ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗೆಲ್ಲುತ್ತೇವೆ. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಎಲ್ಲರೂ ಸಕ್ರಿಯವಾಗಿ ಮತ ಚಲಾಯಿಸುತ್ತಿದ್ದಾರೆ. ಈ ಬಾರಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಹ ವಕ್ತಾರ ಎ.ಎಚ್.ಆನಂದ್, ಬಿಬಿಎಂಪಿ ಮಾಜಿ ಸದಸ್ಯ ಧನರಾಜ್ ಉಪಸ್ಥಿತರಿದ್ದರು.