ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ-ಬಿಜೆಪಿಯಿಂದ ಸದ್ಯದಲ್ಲೇ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು, ಏ.19- ಒಬ್ಬರ ರಾಜೀನಾಮೆ ಹಾಗೂ ಇನ್ನೊಬ್ಬರ ಹಠಾತ್ ನಿಧನದಿಂದ ತೆರವಾಗಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ.

ಮೇ19ರಂದು ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇದೇ 29 ಕಡೆಯ ದಿನವಾಗಿದೆ.

2ನೇ ಹಂತದ ಲೋಕಸಭೆ ಚುನಾವಣೆ ಮತದಾನ ಮಂಗಳವಾರ ನಡೆಯಲಿದ್ದು, ಬಳಿಕ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಈಗಾಗಲೇ ಮೌಖಿಕವಾಗಿ ಪಕ್ಷದ ಅಭ್ಯರ್ಥಿಗಳಿಗೆ ಪ್ರಚಾರದಲ್ಲಿ ತೊಡಗುವಂತೆ ಸೂಚಿಸಲಾಗಿದೆ.

ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನು ಕುಂದುಗೋಳ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಸ್.ಐ.ಚಿಕ್ಕನಗೌಡರ್ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ.

ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಬ್ಬರಿಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಆರಂಭಿಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ರತ್ನಪ್ರಭಾ ಪ್ರಚಾರವನ್ನು ಆರಂಭಿಸಿದ್ದಾರೆ. ಈ ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ.ಉಮೇಶ್ ಜಾಧವ್ ಪರ ಅವರು ಪ್ರಚಾರ ನಡೆಸುತ್ತಿದ್ದಾರೆ.

ಚಿಂಚೋಳಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸಿ ಪ್ರಚಾರವನ್ನು ಆರಂಭಿಸಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಗುಲ್ಬರ್ಗಾ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ರತ್ನಪ್ರಭಾ ಒಲವು ತೋರಿದ್ದರಾದರೂ ಶಾಸಕ ಸ್ಥಾನಕ್ಕೆ ಜಾಧವ್ ರಾಜೀನಾಮೆ ನೀಡಿ ಬಂದಿದ್ದರಿಂದ ಪಕ್ಷ ಅವರಿಗೆ ಟಿಕೆಟ್ ನೀಡಿತು.

ಕುಂದಗೋಳದಿಂದ ಚಿಕ್ಕನಗೌಡರ್:
ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದಿಂದಕಳೆದ ಬಾರಿ ಕೆಲವೇ ಕೆಲವು ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಸ್.ಐ.ಚಿಕ್ಕನಗೌಡರ್ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಯಡಿಯೂರಪ್ಪನವರ ಸಂಬಂಧಿಕರು ಆಗಿರುವ ಚಿಕ್ಕನಗೌಡರ್ ಕಳೆದ ಬಾರಿ ಕೇವಲ 634 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ವಿಜೇತ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‍ನ ಶಿವಳ್ಳಿ 64,871ಮತ ಪಡೆದರೆ ಪರಾಜಿತ ಚಿಕ್ಕನಗೌಡರ್ 64,237 ಮತ ಪಡೆದಿದ್ದರು.

ಶಿವಳ್ಳಿ ನಿಧನರಾದ ಬಳಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಚಿಕ್ಕನಗೌಡರ್ ಕಳೆದ ಬಾರಿ ತಮ್ಮನ್ನು ಕಡಿಮೆ ಅಂತರದಿಂದ ಸೋಲಿಸಿರುವುದನ್ನೇ ಮತದಾರರ ಬಳಿ ಪ್ರಸ್ತಾಪಿಸಿ ಈಗಾಗಲೇ ಪ್ರಚಾರಕ್ಕೆ ಧುಮುಕಿದ್ದಾರೆ.

ಕಾಂಗ್ರೆಸ್‍ನಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಡಾ.ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದರು. ತೀವ್ರ ಹೃದಯಾಘಾತದಿಂದ ಪೌರಾಡಳಿತ ಸಚಿವರಾಗಿದ್ದಶಿವಳ್ಳಿ ಕೊನೆಯುಸಿರೆಳೆದಿದ್ದರು.

ಈ ಎರಡು ಕ್ಷೇತ್ರಗಳಿಗೆ ಮೇ 19ರಂದು ಮತದಾನ ನಡೆದು 23ರಂದು ಲೋಕಸಭೆ ಚುನಾವಣೆಯ ಮತಗಳ ಎಣಿಕೆ ದಿನದಂದೇ ಫಲಿತಾಂಶ ಪ್ರಕಟವಾಗಲಿದೆ.
ಇದೇ 29 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 2ರಂದು ನಾಮಪತ್ರ ಹಿಂಪಡೆಯಲು ಕಡೆದಿನವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ