ಬೆಂಗಳೂರು, ಏ.19-ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಲಗ್ಗೆ ಯಿಟ್ಟಿದ್ದು, ಅಬ್ಬರದ ಚುನಾವಣಾ ಪ್ರಚಾರಕ್ಕೆ ಮುಂದಾಗಿದೆ.
ಮೊದಲ ಹಂತದ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಇಂದು ಬಳ್ಳಾರಿ, ಬೆಳಗಾವಿಯ ಚಿಕ್ಕೋಡಿ ಮತ್ತು ರಾಯಚೂರು ಭಾಗದಲ್ಲಿ ನಡೆಯುವ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಬೆಳಗಾವಿಗೆ ಆಗಮಿಸಲಿರುವ ರಾಹುಲ್ಗಾಂಧಿಯವರು ಅಲ್ಲಿಂದ ಬಳ್ಳಾರಿ ತೋರಣಗಲ್ಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಯಚೂರಿನ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ನಡೆಯುವ ಬೃಹತ್ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜೊತೆಗೆ ಸಂಜೆ 5.30ಕ್ಕೆ ಚಿಕ್ಕೋಡಿಯ ಆರ್ಡಿಪಿಯು ಕಾಲೇಜು ಆವರಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ಗಾಂಧಿ ಭಾಗವಹಿಸುವರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.
ಹೈದರಾಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಾ ಬಂದಿದೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗಕ್ಕೇ ಹೆಚ್ಚು ಆದ್ಯತೆ ಕೊಟ್ಟು ಪ್ರಚಾರ ಮಾಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಕುಸಿದಿದ್ದು, ಅನಿವಾರ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿದ್ದ ಶಕ್ತಿಯನ್ನು ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ನಾಯಕರು ಇಂದಿನಿಂದ ಉತ್ತರ ಕರ್ನಾಟಕ ಭಾಗದತ್ತಲೇ ಹೆಚ್ಚು ಗಮನಹರಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲೇ ಠಿಕಾಣಿ ಹೂಡಲಿದ್ದಾರೆ.
ಮೊದಲ ಹಂತ ಚುನಾವಣೆ ಮುಗಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಸಚಿವರನ್ನು ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ಉಸ್ತುವಾರಿಗಳನ್ನಾಗಿ ನೇಮಿಸಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಅವರ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಲಾಗಿದ್ದು, ಈ ಇಬ್ಬರೂ ನಾಯಕರು ಬಿಎಸ್ವೈ ಕೋಟೆಗೆ ಲಗ್ಗೆ ಇಟ್ಟಿದ್ದಾರೆ.
ಬಳ್ಳಾರಿ ಕ್ಷೇತ್ರದಲ್ಲಿ ಸಂಸದ ಆರ್.ಧೃವನಾರಾಯಣ್, ಉತ್ತರ ಕನ್ನಡ ಕ್ಷೇತ್ರಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿ.ಕೆ.ಹರಿಪ್ರಸಾದ್, ವಿಜಯಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ರಾಯಚೂರು ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಎಂ.ವೀರಪ್ಪಮೊಯ್ಲಿ, ಧಾರವಾಡ ಕ್ಷೇತ್ರಕ್ಕೆ ಸಚಿವ ಕೃಷ್ಣಭೆರೇಗೌಡ, ಬೆಳಗಾವಿ ಕ್ಷೇತ್ರಕ್ಕೆ ಸಚಿವ ಯು.ಟಿ.ಖಾದರ್, ಹಾವೇರಿ ಸಚಿವ ಜಮೀರ್ ಅಹಮ್ಮದ್ ಖಾನ್, ದಾವಣಗೆರೆ ಕ್ಷೇತ್ರಕ್ಕೆ ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಶತಾಯಗತಾಯ ಉತ್ತರ ಕರ್ನಾಟಕ ಭಾಗದಲ್ಲೂ ಹೆಚ್ಚಿನ ಸ್ಥಾನ ಗೆದ್ದು ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ಸಜ್ಜಾಗಿದೆ.