ದಕ್ಷಿಣ ಒಳನಾಡಿನಲ್ಲಿ ಇನ್ನು ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು, ಏ.19-ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.

ನಿನ್ನೆ ಸಂಜೆ ಬೆಂಗಳೂರು, ತುಮಕೂರು, ನೆಲಮಂಗಲ, ಕೆಜಿಎಫ್, ಬಂಗಾರಪೇಟೆ, ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಮಂಡ್ಯದಲ್ಲಿ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ವೆಂಕಟೇಶಪ್ಪ ಎಂಬುವರಿಗೆ ಸೇರಿದ ಗುಡಿಸಲು ಸಿಡಿಲಿನಿಂದ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಗುಡಿಸಲಿನಲ್ಲಿದ್ದ 25 ಕೋಳಿಗಳು ಸೇರಿದಂತೆ ಮತ್ತಿತರ ವಸ್ತುಗಳು ಹಾನಿಯಾಗಿವೆ.

ಬೆಂಗಳೂರಿನ ವಿಜಯನಗರ, ಮಾಗಡಿರಸ್ತೆ, ಕೆಂಗೇರಿ, ಜ್ಞಾನಭಾರತಿ, ಯಶವಂತಪುರ, ಹೆಬ್ಬಾಳ ಸೇರಿದಂತೆ ಕೆಲವು ಕಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಸ್ಥಳೀಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ನೆಲಮಂಗಲದಲ್ಲಿ ಭಾರೀ ಬಿರುಗಾಳಿಗೆ ಮರವೊಂದು ಕಾರಿನ ಮೇಲೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಇನ್ನು ಫ್ಲೈಓವರ್‍ಗಳ ಮೇಲೆ ನೀರು ಜಲಪಾತದಂತೆ ಸುರಿಯುತ್ತಿತ್ತು. ಹಾಗಾಗಿ ಕೆಲವು ಕಡೆ ಸಂಚಾರ ದಟ್ಟಣೆಯೂ ಹೆಚ್ಚಾಗಿತ್ತು.

ದಕ್ಷಿಣ ಒಳನಾಡಿನಲ್ಲಿ ದಾಳಿಯ ಒತ್ತಡ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜಧಾನಿ ಸೇರಿದಂತೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಸೇರಿದಂತೆ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ