ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಬಗ್ಗೆ ಜೋರಾದ ಬೆಟ್ಟಿಂಗ್

ಬೆಂಗಳೂರು,ಏ.19- ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿರುವ ಬೆನ್ನಲ್ಲೇ ಇದೀಗ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಬಗ್ಗೆ ಬೆಟ್ಟಿಂಗ್ ಜೋರಾಗಿದೆ.

ನಿನ್ನೆಯಷ್ಟೇ ಮತದಾನ ಮುಕ್ತಾಯಗೊಂಡರೂ ಫಲಿತಾಂಶಕ್ಕಾಗಿ ಮೇ 23ರವರೆಗೆ ಕಾಯಬೇಕು. ಈಗಾಗಲೇ ಕ್ಷೇತ್ರಗಳ ಶೇಕಡವಾರು ಮತದಾನದ ಮಾಹಿತಿ ಸಂಗ್ರಹಿಸಿರುವ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಮತದಾನ ನಡೆದಿದ್ದು ಇದು ಯಾರಿಗೆ ವರದಾನವಾಗಲಿದೆ ಎಂಬ ಚರ್ಚೆ ರಾಜ್ಯದಾದ್ಯಂತ ತೀವ್ರಗೊಂಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ನಟ ಅಂಬರೀಶ್ ಪತ್ನಿ ಸುಮಲತಾ ನಡುವೆ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟವೇ ನಡೆದಿತ್ತು. ಇದೀಗ ಈ ಹೋರಾಟದಲ್ಲಿ ಯಾರು ಜಯಗಳಿಸಬಹುದು ಎಂಬ ಕುತೂಲಹ ರಾಜ್ಯದಲ್ಲಿ ಮನೆ ಮಾಡಿದ್ದು ಬೆಟ್ಟಿಂಗ್‍ಗೆ ಇಂಬು ಕೊಟ್ಟಿದೆ.

ಮೊದಲ ಹಂತದ ಚುನಾವಣೆಯಲ್ಲಿ ಮಂಡ್ಯದಷ್ಟೇ ಕುತೂಹಲ ಕೆರಳಿಸಿರುವುದು ಹಾಸನ. ಇಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಮೈತ್ರಿ ಅಭ್ಯರ್ಥಿಯಾಗಿದ್ದು, ಇವರ ವಿರುದ್ಧ ಎ.ಮಂಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸ್ವತಃ ದೇವೇಗೌಡರು ತಮ್ಮ ತವರು ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದರು. ಹಾಗಾಗಿ ಜೆಡಿಎಸ್ ಪಾಲಿಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಸನದಲ್ಲೂ ಶೇಕಡವಾರು ಮತದಾನ ಹೆಚ್ಚಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಅಂತೆಯೇ ತುಮಕೂರು ಕ್ಷೇತ್ರದಲ್ಲಿ ಸ್ವತಃ ದೇವೇಗೌಡರೇ ಮೈತ್ರಿ ಅಭ್ಯರ್ಥಿಯಾಗಿದ್ದು ಇಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರದ ಚರ್ಚೆ ಚುರುಕುಗೊಂಡಿದೆ.

ಇನ್ನುಳಿದಂತೆ ಮೈಸೂರು, ಕೋಲಾರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಸೋಲು-ಗೆಲುವಿನ ಬಾಜಿ ಜೋರಾಗಿ ನಡೆಯುತ್ತಿದೆ.

ಕೆಲವರು ಮೈತ್ರಿ ಅಭ್ಯರ್ಥಿಯ ಪರ ಬಾಜಿ ಕಟ್ಟಿದರೆ, ಮತ್ತೆ ಹಲವರು ಬಿಜೆಪಿ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಮತದಾನ ಮುಗಿಯುತ್ತಲೇ ಬೆಟ್ಟಿಂಗ್ ವ್ಯವಹಾರಕ್ಕೆ ವೇಗ ದೊರೆತಿದೆ.

ಇನ್ನು ಎರಡನೇ ಹಂತದ ಮತದಾನ ಏ.23ರಂದು ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳ ನಾಯಕರು ಉತ್ತರದತ್ತ ಮುಖ ಮಾಡಿದ್ದಾರೆ. ಉತ್ತರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಗೆಲುವಿಗಾಗಿ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಘಟಾನುಘಟಿ ನಾಯಕರು ಇದೀಗ ಉತ್ತರದಲ್ಲೇ ಠಿಕಾಣಿ ಹೂಡಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ-ಪ್ರತಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ