ಬೆಂಗಳೂರು, ಏ.19- ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಮತದಾನದ ಪ್ರಮಾಣ ಕಡಿಮೆಯಾಗಲು ಇಲ್ಲಿ ವಾಸಿಸುತ್ತಿರುವ ಪರಭಾಷಿಗರೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಇಲ್ಲಿನ ಸುಮಾರು ಒಂದು ಕೋಟಿ ಜನಸಂಖ್ಯೆಯಲ್ಲಿ ಶೇ.60ರಷ್ಟು ಮಂದಿ ಪರಭಾಷಿಗರಾಗಿದ್ದರೆ, ಕನ್ನಡಿಗರ ಸಂಖ್ಯೆ ಕೇವಲ ಶೇ.40ರಷ್ಟು ಮಾತ್ರ ಇದೆ.
ನಗರದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಬಹುತೇಕ ಪ್ರದೇಶಗಳಲ್ಲಿ ಕನ್ನಡಿಗರಿಗಿಂತ ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಬಿಹಾರಿ, ರಾಜಸ್ಥಾನಿ ಮತ್ತಿತರ ಹೊರ ರಾಜ್ಯಗಳ ಪರಭಾಷಿಗರೇ ಹೆಚ್ಚಾಗಿದ್ದಾರೆ.
ನಗರದಲ್ಲಿ ವಾಸಿಸುತ್ತಿರುವ ಬಹುತೇಕ ಪರಭಾಷಿಗರು ತಮ್ಮ ಹಕ್ಕು ಚಲಾಯಿಸಲು ತಮ್ಮ ತಮ್ಮ ಊರುಗಳಿಗೆ ತೆರಳಿದ ಪರಿಣಾಮವೇ ನಿನ್ನೆ ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನಕ್ಕೆ ಕಾರಣ ಎನ್ನಲಾಗಿದೆ.
ಅದರಲ್ಲೂ ತಮಿಳುನಾಡಿನ ವೆಲ್ಲೂರು ಕ್ಷೇತ್ರ ಹೊರತುಪಡಿಸಿ ಉಳಿದ 38 ಲೋಕಸಭಾ ಕ್ಷೇತ್ರಗಳಿಗೂ ನಿನ್ನೆಯೇ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ತಮಿಳರು ತಮ್ಮ ಮತ ಚಲಾಯಿಸಲು ತಾಯ್ನಾಡಿಗೆ ತೆರಳಿದ್ದರು.
ಹೀಗಾಗಿಯೇ ಅತಿಹೆಚ್ಚು ತಮಿಳರು ವಾಸಿಸುತ್ತಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೇ ಕೇವಲ ಶೇ. 50.84ರಷ್ಟು ಅತಿ ಕಡಿಮೆ ಮತದಾನವಾಗಿದೆ.
ಚುನಾವಣೆ ಬಗ್ಗೆ ವಿದ್ಯಾವಂತರಲ್ಲಿರುವ ನಿರಾಸಕ್ತಿ, ರಾಜಕಾರಣಿಗಳ ಮೇಲಿನ ಅಸಡ್ಡೆ ಹಾಗೂ ಮತದಾನ ಸಂದರ್ಭದಲ್ಲಿ ಸಿಕ್ಕ ಸಾಲು ಸಾಲು ರಜೆ ಕಡಿಮೆ ಮತದಾನಕ್ಕೆ ಸ್ವಲ್ಪ ಮಟ್ಟಿನ ಕಾರಣವಾಗಿರಬಹುದು. ಆದರೆ ಅತಿ ಕಡಿಮೆ ಮತದಾನಕ್ಕೆ ಪರಭಾಷಿಗರು ಊರು ತೊರೆದಿರುವುದೇ ಪ್ರಮುಖ ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಚುನಾವಣಾ ಆಯೋಗ ಮತದಾನದ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಐಟಿ-ಬಿಟಿ ಮಂದಿಯನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಯಾರನ್ನೋ ಗೆಲ್ಲಿಸಲು ನಾವ್ಯಾಕೆ ಬಿಸಿಲಲ್ಲಿ ನಿಂತು ಮತ ಚಲಾಯಿಸಬೇಕು ಎನ್ನುವ ಮನೋಭಾವನೆ ಹೊಂದಿರುವ ಯುವ ಪೀಳಿಗೆಯ ಮನಪರಿವರ್ತನೆಯತ್ತ ಗಮನಹರಿಸುವ ಅಗತ್ಯವಿದೆ.