2014ರ ಮಹಾಚುನಾವಣೆ ಫಲಿತಾಂಶ ಪುನರಾವರ್ತನೆಯಾಗಲಿದೆ-ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಏ.19- ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಲಭಿಸಲಿದ್ದು, 2014ರ ಮಹಾಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೃಢ ವಿಶ್ವಾಸ ತುಂಬಿದ ಮಾತುಗಳಲ್ಲಿ ಹೇಳಿದ್ದಾರೆ.

ನನಗೆ ನಾನೇ ಚಾಲೆಂಬರ್ ಆಗಿ ಈಗಲೂ ಪರಿಗಣಿಸಿದ್ದೇನೆ ಎಂದು ಹೇಳಿರುವ ಮೋದಿ, ದೇಶದ ಮುಂದೆ ಇರುವ ಜ್ವಲಂತ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ತಮ್ಮ ನೇತೃತ್ವದ ಎನ್‍ಡಿಎ ಸರ್ಕಾರ ಬದ್ಧವಾಗಿದೆ ಎಂದು ಸಾರಿದ್ದಾರೆ.

ಭಷ್ಟ್ರಾಚಾರ, ಭಯೋತ್ಪಾದನೆ ಮತ್ತು ವಂಶಾಡಳಿತ ನಿರ್ಮೂಲನೆಗೆ ತಾವು ಮತ್ತು ಎನ್‍ಡಿಎ ಸರ್ಕಾರ ಕಂಕಣ ಬದ್ಧವಾಗಿದೆ. ಈ ಪಿಡುಗನ್ನು ದೇಶದಿಂದ ಹೋಗಲಾಡಿಸುವವರೆಗೆ ವಿರಮಿಸುವುದಿಲ್ಲ ಎಂದು ಮೋದಿ ಘೋಷಿಸಿದ್ದಾರೆ.

ಪ್ರಮುಖ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಸಮರದಲ್ಲಿ ನಮ್ಮ ಮುಂದೆ ಅನೇಕ ಸವಾಲುಗಳು ಮತ್ತು ಸಮಸ್ಯೆಗಳು ಇದ್ದವು. ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಐದು ವರ್ಷಗಳ ಹಿಂದೆ ನನ್ನಲ್ಲಿ ಇದ್ದ ಉತ್ಸಾಹ ಕುಂದಿಲ್ಲ. ನಾನು ಈ ಕ್ಷಣದಲ್ಲೂ ನನ್ನನ್ನು ನಾನು ಚಾಲೆಂಜರ್ ಎಂದೇ ಪರಿಗಣಿಸಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಉತ್ತಮ ಆಡಳಿತ, ಜನಪರ ಕಾರ್ಯಕ್ರಮಗಳು, ಮತ್ತು ಪ್ರಗತಿದಾಯಕ ಯೋಜನೆಗಳಿಂದ ಜನರು ಬಿಜೆಪಿ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ.

ದೇಶದಲ್ಲಿ ತಮ್ಮ ಪಕ್ಷದ ಪರ ದೊಡ್ಡ ಸಂಚಲನದ ಅಲೆ ಎದ್ದಿದೆ. 2019ರಲ್ಲಿ ಭಾರೀ ಬಹುಮತದೊಂದಿಗೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮೋದಿ ವಿಶ್ವಾಸದಿಂದ ನುಡಿದಿದ್ದಾರೆ.

ಈ ಹಿಂದೆ ಆಡಳಿತ ನಡೆಸಿದ ಯುಪಿಎ ಸರ್ಕಾರದಂತೆ ಚಲ್ತಾ ಹೈ (ಹೇಗಿದ್ದರೂ ನಡೆಯುತ್ತದೆ) ಎಂಬ ದುರ್ಬಲ ಮನಸ್ಥಿತಿ ನಮ್ಮದಲ್ಲ. ನಾವು ದೇಶದ ಭದ್ರತೆ ಮತ್ತು ರಾಷ್ಟ್ರದ ಜನರ ಹಿತಾರಕ್ಷತೆ ವಿಷಯದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ. ದೃಢ ನಿರ್ಧಾರ ಮತ್ತು ಆತ್ಮವಿಶ್ವಾಸದಿಂದ ನಾವು ಸರಿದಾರಿಯಲ್ಲಿ ಮುನ್ನಡೆದ ಕಾರಣ ಜನರು ನಮ್ಮ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಅವರ ಆಶೀರ್ವಾದದ ಬಲದಿಂದ ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮೋದಿ ಹೇಳಿದ್ದಾರೆ.

ದೇಶದ ಆರ್ಥಿಕ ಪ್ರಗತಿ ಮತ್ತು ಜನರ ಏಳಿಗೆಗಾಗಿ ಸರ್ಕಾರ ಕೈಗೊಂಡ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅವರು ಪಟ್ಟಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ