ಘಟಾನುಘಟಿಗಳಿಂದ ಮತದಾನ

ನವದೆಹಲಿ: ರಾಜ್ಯದ 14 ಲೋಕಸಭಾ ಕ್ಷೇತ್ರ ಸೇರಿದಂತೆ 95 ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಗಣ್ಯರು, ರಾಜಕೀಯ ಮುಖಂಡರು ಮತ್ತು ಸೆಲೆಬ್ರಿಟಿಗಳು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ಮಂಡ್ಯದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆಗೆ ರಾಮನಗರದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ತುಮಕೂರಿನ ಕೊರಟಗೆರೆಯ ಮತಗಟ್ಟೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತಮ್ಮ ಪತ್ನಿ ಕನ್ನಿಕಾ ಪರಮೇಶ್ವರ್ ಜೊತೆಗೂಡಿ ಬಂದು ಮತದಾನ ಮಾಡಿದರು.

ಹಾಸನದಲ್ಲಿ ಸಚಿವ ಹೆಚ್ ಡಿ ರೇವಣ್ಣ ಮತ ಚಲಾಯಿಸುವ ಮುನ್ನ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ ಹಾಸನದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜೊತೆಗೆ ಬಂದು ಪಡುವಲಹಿಪ್ಪೆ ಗ್ರಾಮದ ದೇವಸ್ಥಾನದಲ್ಲಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ದಂಪತಿ ಹಾಸನ ಜಿಲ್ಲೆ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರ ಮತಗಟ್ಟೆ ಸಂಖ್ಯೆ 54ರಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ರಾಜಮನೆತನದ ಯದುವೀರ್ ದಂಪತಿ ತಮ್ಮ ಹಕ್ಕು ಚಲಾಯಿಸಿದರು.

ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ರಜನಿಕಾಂತ್ ಚೆನ್ನೈಯ ಸ್ಟೆಲ್ಲಾ ಮ್ಯಾರಿಸ್ ಕಾಲೇಜಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನಟ ಕಮಲ್ ಹಾಸನ್ ತಮ್ಮ ಪುತ್ರಿ ಶ್ರಿತಿ ಹಾಸನ್ ಜತೆ ಚೆನ್ನೈಯ ಅಲ್ವರ್ ಪೇಟೆ ಕಾರ್ಪೊರೇಶನ್ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ನಾಯಕ ಮಾಜಿ ಸಚಿವ ಪಿ ಚಿದಂಬರಂ ಶಿವಗಂಗಾದಲ್ಲಿ ವೋಟಿಂಗ್ ಮಾಡಿದರು.

ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸಾಮಿ ಸೇಲಂನ ಎಡಪ್ಪಾಡಿ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ಪುದುಚೆರಿ ಗವರ್ನರ್ ಕಿರಣ್ ಬೇಡಿ ಮತ ಚಲಾಯಿಸಿದರು. ಮಣಿಪುರದ ಇಂಫಾಲ್ ನಲ್ಲಿ ನಜ್ಮಾ ಹೆಫ್ತುಲ್ಲಾ ಮತ ಚಲಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ