ಔರಾದ್ ನಲ್ಲಿ ಖಂಡ್ರೆ ಪರ ಕೌಡ್ಯಾಳ ಪ್ರಚಾರ ಬಿಜೆಪಿ ಸಂವಿಧಾನ ವಿರೋಧಿಯಾಗಿದೆ

ಬೀದರ್: ಲೋಕಸಭಾ ಚುನಾವಣೆ ಎಲ್ಲರ ಚುನಾವಣೆಯಾಗಿದೆ. ಪ್ರಜಾಪ್ರಭುತ್ವದ ವಿರುದ್ಧ ಆಡಳಿತ ನೀಡುತ್ತಿರುವ ಹಾಗೂ ಸಂವಿಧಾನ ಬದಲಾವಣೆ ಷಡ್ಯಂತ್ರ ಮಾಡುತ್ತಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ದಿಲ್ಲಿ ಬದಲು ಮನೆಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಕಳೆದ ವಿಧಾನಸಭೆ ಚುನಾವಣೆಯ ಔರಾದ್ ಕ್ಷೇತ್ರದ ಕೈ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ ಹೇಳಿದರು.


ಔರಾದ್ ತಾಲೂಕಿನ ಸುಂದಾಳ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಂವಿಧಾನ ಬದಲಾವಣೆಗೆ ನಾವು ಬಂದಿದ್ದೇವೆ ಎಂದು ಕೇಂದ್ರದ ಸಚಿವರೊಬ್ಬರು ಹೇಳಿಕೆ ನೀಡಿದರು ಸಹ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್ಎಸ್ಎಸ್ ಇದರ ಬಗ್ಗೆ ಮಾತನಾಡಿಲ್ಲ. ಸಂವಿಧಾನ ಬದಲಾವಣೆಗೆ ಪರೋಕ್ಷವಾಗಿ ಮೋದಿ, ಬಿಜೆಪಿ ಬೆಂಬಲಿಸುತ್ತಿದೆ ಎಂದು ದೂರಿದರು.

ಈಶ್ವರ ಖಂಡ್ರೆ ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.


ಮೋದಿ ಆಡಳಿತ ಹೊರತುಪಡಿಸಿ ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯಾವ ಸರ್ಕಾರ ಸಹ ಸಂವಿಧಾನ ವಿರುದ್ಧ, ಪ್ರಜಾಪ್ರಭುತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ಕೆಲಸ ಮಾಡಿದರು. ಆದರೆ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಪ್ರಜಾಪ್ರಭುತ್ವ ವಿರೋಧ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಬಿಜೆಪಿಗೆ ಪಾಠ ಕಲಿಸಲು ಕಾಂಗ್ರೆಸ್‌ ಗೆ ಬೆಂಬಲಿಸಬೇಕು ಎಂದರು.


ಮಾಜಿ ಶಾಸಕ ಗುಂಡಪ್ಪ ವಕೀಲ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ಪಂಡಿತ ಚಿದ್ರಿ, ರಾಜಕುಮಾರ ಹಲಬುರ್ಗೆ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ