ಕಾಂಗ್ರೆಸ್ ಅವಧಿಯಲ್ಲೇ ಬೀದರ್ ಅಭಿವೃದ್ಧಿ

ಬೀದರ್: ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲೇ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.

ಬೀದರ್ ತಾಲ್ಲೂಕಿನ ಜನವಾಡ ಹಾಗೂ ಮಾಳೆಗಾಂವ್ ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ನಾನು ಪೌರಾಡಳಿತ ಸಚಿವನಾಗಿದ್ದಾಗ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಜಿಲ್ಲೆಗೆ ವಿಶೇಷ ಅನುದಾನ ಮಂಜೂರು ಮಾಡಿಸಿದ್ದೆ.

ಜಿಲ್ಲೆಯಲ್ಲಿ ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡಿದ್ದೆ ಎಂದು ತಿಳಿಸಿದರು.

ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ದೇಶದ ಜನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದೆ. ಈ ಪಕ್ಷದಲ್ಲಿ ಸರ್ವ ಜಾತಿ, ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಇದೆ. ಬೀದರ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಚುನಾವಣೆಯಲ್ಲಿ ತಮ್ಮನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಮಾತನಾಡಿ, ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಸಾಲ ಮನ್ನಾ, ಬಡವರ ಬಂಧು, ಆರೋಗ್ಯ ಕರ್ನಾಟಕ, ಮಾತೃಶ್ರೀ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಕಾಯಕ ಯೋಜನೆ, ಕಾಪಿಟ್ ವಿತ್ ಚೈನಾ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ರೈತರು, ಬಡವರು, ಮಹಿಳೆಯರು, ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ನೆರವಾಗಿದೆ ಎಂದು ತಿಳಿಸಿದರು.

ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿಯನ್ನು ಚುನಾಯಿಸಬೇಕು ಎಂದು ಕೋರಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಮಾತನಾಡಿ, ಬೀದರ-ಬೆಂಗಳೂರು ಹೊಸ ರೈಲು, ಬೀದರ-ಹೈದರಾಬಾದ್ ಇಂಟರ್ಸಿಟಿ ರೈಲು, ಖಾನಾಪುರ ಬಳಿ ಪಿಟ್ಲೈನ್, ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮುಂತಾದವು ಕಾಂಗ್ರೆಸ್ ಕೊಡುಗೆಗಳಾಗಿವೆ ಎಂದು ತಿಳಿಸಿದರು.

ಬೀದರ-ಬೆಂಗಳೂರು ಹೊಸ ರೈಲಿನಿಂದ ರಾಜಧಾನಿಗೆ ಸಂಪರ್ಕ ಸುಲಭವಾಗಿದೆ. ಇಂಟರ್ಸಿಟಿ ರೈಲು ಬೀದರ- ಹೈದರಾಬಾದ್ ಅನ್ನು ಹತ್ತಿರವಾಗಿಸಿದ್ದು, ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ಪಿಟ್ಲೈನ್ನಿಂದಾಗಿ ಇಂದು ಜಿಲ್ಲೆಯಲ್ಲಿ ಹೆಚ್ಚು ರೈಲುಗಳ ಓಡಾಟ ಸಾಧ್ಯವಾಗಿದೆ ಎಂದು ಹೇಳಿದರು.

ಈಶ್ವರ ಖಂಡ್ರೆ ಸುಶಿಕ್ಷಿತರಾಗಿದ್ದಾರೆ. ಎಲ್ಲ ಜಾತಿ, ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಉಳ್ಳವರಾಗಿದ್ದಾರೆ. ಇವರು ಲೋಕಸಭೆಗೆ ಆಯ್ಕೆಯಾದರೆ ಜಿಲ್ಲೆಗೆ ಒಳಿತಾಗಲಿದೆ ಎಂದು ಹೇಳಿದರು.

ಒಳ್ಳೆಯ ಪ್ರತಿನಿಧಿ ಆಯ್ಕೆಯಾದರೆ ಪ್ರಗತಿಯ ಮಾರ್ಗಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಆದ್ದರಿಂದ ಮತದಾರರು ಈಶ್ವರ ಖಂಡ್ರೆ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸಿಮೊದ್ದಿನ್ ಪಟೇಲ, ಸದಸ್ಯ ವಿಜಯಕುಮಾರ ಪಾಟೀಲ ಗಾದಗಿ, ಕೆಪಿಸಿಸಿ ಕಾರ್ಯದರ್ಶಿ ಅಮೃತರಾವ್ ಚಿಮಕೋಡೆ, ಪಂಡಿತ ಚಿದ್ರಿ, ಚಂದ್ರಕಾಂತ ಹಿಪ್ಪಳಗಾಂವ್, ರಾಜಕುಮಾರ ಪಾಟೀಲ, ಅನಿಲಕುಮಾರ, ಸಾಜದ್ ಮಿಯ, ಶಂಕರ ದೊಡ್ಡಿ, ಬಶೀರ್, ಮಾಣಿಕಪ್ಪ ಕೋಡಗೆ, ಡಿ.ಕೆ. ಸಂಜುಕುಮಾರ, ಮುರಳೀಧರ ಎಕಲಾರಕರ್, ಜಾನ್ ವೆಸ್ಲಿ, ಭಗವಂತ ಪಾಂಡ್ರೆ, ಕಾಮಶೆಟ್ಟಿ, ಬಸವರಾಜ ಬುಯ್ಯ, ನಾರಾಯಣ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ