ಜಕಾರ್ತ, ಏ.17-ಇಂಡೋನೇಷ್ಯಾದಲ್ಲಿ ವಿಶ್ವದ ಅತಿದೊಡ್ಡ ಏಕದಿನ ಚುನಾವಣೆಗೆ ಇಂದು ಬಿರುಸಿನ ಮತದಾನವಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ದೇಶದಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಗಾಗಿ ಹಾಲಿ ಅಧ್ಯಕ್ಷ ಜೊಕೊ ವಿಡೊಡೊ ಮತ್ತು ಮಾಜಿ ಸೇನಾ ಮುಖ್ಯಸ್ಥ ಪ್ರಾಬೊವೋ ಸುಬಿಯಾಂಟೋ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆದಾಗ್ಯೂ ವಿಡೊಡೊ ಪುನರಾಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಸ್ಥಳೀಯ ಸಂಸ್ಥೆಗಳು, ಸಂಸತ್ ಮತ್ತು ಅಧ್ಯಕ್ಷ ಸ್ಥಾನ-ಈ ಮೂರೂ ಚುನಾವಣೆಗಳು ಒಂದೇ ದಿನ ನಡೆಯುತ್ತಿರುವುದು ವಿಶೇಷ. ನಗರಸಭೆ ಸದಸ್ಯ ಸ್ಥಾನದಿಂದ ಅಧ್ಯಕ್ಷ ಹುದ್ದೆವರೆಗೆ ಒಟ್ಟು 2.45 ಲಕ್ಷ ಅಭ್ಯರ್ಥಿಗಳು ಸ್ಫರ್ಧಿಸಿರುವುದು ಕೂಡ ದಾಖಲೆಯಾಗಿದೆ.
ದ್ವೀಪರಾಷ್ಟ್ರದ 190 ದಶಲಕ್ಷಕ್ಕೂ ಹೆಚ್ಚು ಇಂಡೋನೇಷ್ಯನ್ನರು ಇಂದು ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಒಂದೇ ದಿನ ನಡೆದ ವಿಶ್ವದ ಅತಿದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆಗೆ ಈ ಸಾರ್ವತ್ರಿಕ ಮತದಾನ ಪಾತ್ರವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಮತದಾರ ಆರಂಭವಾಗಿದ್ದು, ಜನರು ಮತಗಟ್ಟೆಗಳ ಮುಂದೆ ಸದರಿ ಸಾಲುಗಳಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಜ್ವಾಲಾಮುಖಿ ಸಕ್ರಿಯವಾಗಿರುವ ಸುಮಾತ್ರಾ ದ್ವೀಪ ಮತ್ತು ಇತರ ದ್ವೀಪ ಸಮೂಹಗಳ ಸೂಕ್ಷ್ಮ ಸ್ಥಳಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.
ಅನೇಕ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವುದಕ್ಕೆ ಮುನ್ನ ಮುಂಜಾನೆಯೇ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಇಂಡೋನೆಷ್ಯಾದಲ್ಲಿ ಶೇ.80ರಷ್ಟು ಮುಸ್ಲಿಮರಿದ್ದಾರೆ.
ಹಾಲಿ ಅಧ್ಯಕ್ಷ ಜೊಕೊ ವಿಡೊಡೊ(57) ಮತ್ತ ದೇಶದ ಅತ್ಯುನ್ನತ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದೆ. 2014ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಸುಬಿಯಾಂಟೋ(67) ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮೇ ಅಂತ್ಯದ ವೇಳೆಗೆ ಈ ಮೂರು ಚುನಾವಣೆಗಳ ಫಲಿತಾಂಶಗಳು ಪ್ರಕಟವಾಗಲಿದೆ.