ಬಿಗಿ ಭದ್ರತೆ ನಡುವೆ ನಾಳೆ ನಡೆಯಲಿರುವ 2ನೇ ಹಂತದ ಮತದಾನ

ನವದೆಹಲಿ,ಏ.17- ಹೈವೋಲ್ಟೇಜ್ ಹದಿನೇಳನೆ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಾಳೆ ಭಾರೀ ಬಿಗಿ ಭದ್ರತೆ ನಡುವೆ ನಡೆಯಲಿದೆ.

ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 97 ಕ್ಷೇತ್ರಗಳಲ್ಲಿ ಗುರುವಾರದ ಮತದಾನಕ್ಕೆ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ದತೆಯೊಂದಿಗೆ ಸಜ್ಜಾಗುತ್ತಿದೆ.

ನಕ್ಸಲರು ಮತ್ತು ಉಗ್ರರ ದಾಳಿ ಸಾಧ್ಯತೆ ಆತಂಕದ ಹಿನ್ನೆಲೆಯಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿನ ನಿಗಾ ಇಡಲಾಗಿದ್ದು, ಅಭೂತಪೂರ್ವ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

ಚುನಾವಣೆಗೆ ನಿನ್ನೆ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಘಟಾನುಘಟಿಗಳ ನಡುವೆ ಹೋರಾಟಕ್ಕೆ ಅಖಾಡ ಸಜ್ಜಾಗಿದೆ.
ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳು, ಕರ್ನಾಟಕದ 14, ಮಹಾರಾಷ್ಟ್ರದ 10, ಉತ್ತರಪ್ರದೇಶದ 8, ಅಸ್ಸಾಂ, ಬಿಹಾರ ಮತ್ತು ಒಡಿಶಾದ ತಲಾ 5, ಛತ್ತೀಸ್‍ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ಜಮ್ಮು-ಕಾಶ್ಮೀರದ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದೊಂದು ಕ್ಷೇತ್ರಗಳಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ.

ಏಷ್ಯಾ ಖಂಡದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ 8 ಸ್ಥಾನಗಳಿಗೆ ಒಟ್ಟು 85 ಅಭ್ಯರ್ಥಿಗಳು ಸ್ಫರ್ಧಾ ಕಣದಲ್ಲಿದ್ದಾರೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಆಯಾ ರಾಜ್ಯಗಳ ಪ್ರಮುಖ ಪ್ರಾದೇಶಿಕ ಪಕ್ಷಗಳು ನಿನ್ನೆ ಮತದಾರರನ್ನು ಓಲೈಸುವ ಕೊನೆ ನಿಮಿಷಗಳ ಕಸರತ್ತು ನಡೆಸಿದವು. ಎಲ್ಲ 97 ಲೋಕಸಭಾ ಕ್ಷೇತ್ರಗಳಲ್ಲೂ ಕೊನೆ ದಿನದ ಅಬ್ಬರದ ಪ್ರಚಾರ ಕಾರ್ಯಗಳು ಬಿರುಸಿನಿಂದ ಕೂಡಿದ್ದವು.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಓಡಿಶಾ ಮತ್ತು ಛತ್ತೀಸ್‍ಗಢದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಪರ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದರು.

ಓಡಿಶಾ ರಾಜಧಾನಿ ಭುವನೇಶ್ವರ ಮತ್ತು ಸಂಬಾಲ್‍ಪುರ್‍ನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ರ್ಯಾಲಿಗಳಲ್ಲಿ ಮೋದಿ ಪಾಲ್ಗೊಂಡರು.

ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರ್ ಜಿಲ್ಲೆಯಲ್ಲಿ ಪ್ರಧಾನಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕೇರಳದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ಕಾಂಗ್ರೆಸ್ ಪರ ಮತ ಹಾಕುವಂತೆ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದರು.

ವ್ಯಾಪಕ ಬಂದೋಬಸ್ತ್: ಮೊದಲ ಹಂತದಲ್ಲಿ ಚುನಾವಣೆ ವೇಳೆ ಆಂಧ್ರಪ್ರದೇಶ ಸೇರಿದಂತೆ ಕೆಲವೆಡೆ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಎರಡನೇ ಹಂತದ ಚುನಾವಣೆ ವೇಳೆ ಇಂಥ ಅಹಿತಕರ ಘಟನೆಗಳು ಮರುಕಳಿಸದಂತೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು.

ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತಾ ಪಡೆಗಳ ಸರ್ಪಗಾವಲು ಹಾಕಲಾಗಿದೆ.

ನಾಳೆ ಮತದಾನ ನಡೆಯುವ ನಕ್ಸಲ್ ಉಪಟಳವಿರುವ ಛತ್ತೀಸ್‍ಗಢ, ಬಿಹಾರ ಮತ್ತು ಓಡಿಶಾ ರಾಜ್ಯಗಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಬಹಿಷ್ಕರಿಸುವಂತೆ ನಕ್ಸಲರು ಮತದಾರರಿಗೆ ಬೆದರಿಕೆ ಹಾಕಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯ ಅಸ್ಸಾಂ, ಮಣಿಪುರ ಮತ್ತು ತ್ರಿಪುರ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲೂ ಉಗ್ರಗಾಮಿಗಳ ದಾಳಿ ಆತಂಕ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಏ.11 ರಂದು ನಡೆದ ಪ್ರಥಮ ಹಂತದ ಮತದಾನದ ವೇಳೆ ಬಹುತೇಕ ಕಡೆ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ದೋಷದಿಂದಾಗಿ ಕೆಲ ಕಾಲ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಎರಡನೇ ಹಂತದಲ್ಲಿ ಇಂಥ ಗೊಂದಲಗಳು ಪುನರಾವರ್ತನೆಯಾಗದಂತೆ ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಏ.11ರಂದು ಆರಂಭವಾದ ಲೋಕಸಭಾ ಸಮರ ಮೇ 19ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಮೇ 23ರಂದು 17ನೇ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ