ಬೆಂಗಳೂರು, ಏ.17- ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಒಳಪಡುವ 5 ಲೋಕಸಭಾ ಕ್ಷೇತ್ರಗಳ 7,521 ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಲೋಕಸಭಾ ಕ್ಷೇತ್ರಗಳ ಜತೆಗೆ ಚಿಕ್ಕಬಳ್ಳಾಪುರದ ಒಂದು ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೂರು ಕ್ಷೇತ್ರಗಳು ಕಮಿಷನರೇಟ್ ವ್ಯಾಪ್ತಿಗೆ ಒಳಪಡುತ್ತವೆ.
ಈ ಕ್ಷೇತ್ರಗಳ ಒಟ್ಟು 7,521 ಮತಗಟ್ಟೆಗಳಲ್ಲಿ 1241 ಮತಗಟ್ಟೆಗಳನ್ನ ಸೂಕ್ಷ್ಮ ಮತಗಟ್ಟೆಗಳೆಂದು, ಉಳಿದ 6330 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಪ್ರತಿ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಡ್ಕಾನ್ಸ್ಟೇಬಲ್ ಹಾಗೂ ಒಬ್ಬ ಕಾನ್ಸ್ಟೇಬಲ್ನನ್ನು ನಿಯೋಜಿಸಲಾಗಿದೆ.ಸಾಮಾನ್ಯ ಮತಗಟ್ಟೆಗೆ ಕಾನ್ಸ್ಟೇಬಲ್ ಇಲ್ಲವೆ ಗೃಹ ರಕ್ಷಕ ದಳದ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿ 10 ಮತಗಟ್ಟೆಗಳಿಗೆ ಓರ್ವ ಪಿಎಸ್ಐ ಹಾಗೂ 20 ಮತಗಟ್ಟೆಗಳಿಗೆ ಒಬ್ಬ ಇನ್ಸ್ಪೆಕ್ಟರ್ ಅನ್ನು ನಿಯೋಜಿಸಲಾಗಿದ್ದು , ಚುನಾವಣೆ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ.
ಭದ್ರತಾ ದೃಷ್ಟಿಯಿಂದ ಸ್ಥಳೀಯ ಪೊಲೀಸರ ಜತೆಗೆ ಕೇಂದ್ರ ತುಕಡಿಗಳು ಹಾಗೂ ಸಿಎಆರ್ ಪ್ಲಟೂನ್ಗಳನ್ನು ನಿಯೋಜನೆ ಮಾಡಲಾಗಿದ್ದು , ನ್ಯಾಯ ಹಾಗೂ ಮುಕ್ತ ಚುನಾವಣೆಗೆ ಪೊಲೀಸರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.