ಹಲವರ ಭವಿಷ್ಯದ ಭಾಷ್ಯವನ್ನು ಬರೆಯುವ ಈ ಚುನಾವಣೆ

ಬೆಂಗಳೂರು, ಏ.17- ಪ್ರಸ್ತುತ ಲೋಕಸಭಾ ಚುನಾವಣೆ ಕಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ವೀರಪ್ಪ ಮೊಯ್ಲಿ ಸ್ಪರ್ಧಿಸಿರುವುದು ವಿಶೇಷವಾಗಿರುವುದಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಹಾಲಿ ಸಚಿವ ಕೃಷ್ಣಭೆರೇಗೌಡ ಅವರು ಅಖಾಡದಲ್ಲಿದ್ದು, ಇವರುಗಳ ಭವಿಷ್ಯದ ಭಾಷ್ಯವನ್ನು ಬರೆಯುವ ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ತಮ್ಮ ತವರು ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ಪರ್ಧಿಸಿದ್ದಾರೆ.

ಜೆಡಿಎಸ್‍ನ ಅತ್ಯಂತ ಪ್ರಭಾವ ವಿರುವ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲಾಗಿದೆ. 8 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದು, 3 ಸಚಿವರು, 3 ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನಗರಸಭೆಯಲ್ಲಿ ಜೆಡಿಎಸ್ ಪ್ರಭಾವವಿದ್ದು, ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಿದ್ದಾರೆ.

ಅತ್ತ ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತೊಮ್ಮೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರದಿಂದ ಪುನರಾಯ್ಕೆ ಬಯಸಿದರೆ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಪುನರಾಯ್ಕೆ ಬಯಸಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸದಾನಂದಗೌಡರ ಪ್ರತಿಸ್ಪರ್ಧಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ಕಣಕ್ಕಿಳಿದಿದ್ದಾರೆ.

ಅತ್ತ ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಸ್ಪರ್ಧಿಸಿದ್ದು, ಇವರ ಶಿಷ್ಯ ಬಿಜೆಪಿಯಿಂದ ಪ್ರತಿಸ್ಪರ್ಧಿಯಾಗಿದ್ದಾರೆ.
ಒಟ್ಟಾರೆ ಘಟಾನುಘಟಿಗಳ ಭವಿಷ್ಯವನ್ನು ಲೋಕಸಭೆ ಚುನಾವಣೆ ನಿರ್ಧರಿಸಲಿದೆ.

ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪುತ್ರರು ಕಣದಲ್ಲಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೆ, ಅಬ್ಬರದ ಪ್ರಚಾರಕ್ಕೂ ಕಾರಣವಾಗಿದ್ದು, ಈ ಚುನಾವಣಾ ಫಲಿತಾಂಶ ರಾಜ್ಯದ ರಾಜಕೀಯ ಹೊಸ ದಿಕ್ಸೂಚಿಗೂ ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ.

ಏ.18 ಮತ್ತು 23 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ.23 ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಮತದಾರ ಯಾವ ಕೈ ಹಿಡಿಯಲಿದ್ದಾನೆ, ಯಾರ ಭವಿಷ್ಯ ಬರೆಯಲಿದ್ದಾನೆ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ