ಚುನಾವಣೆ ನಿಮಿತ್ತ ಜಿಲ್ಲೆಯಾದ್ಯಂತ ಪೊಲೀಸರ ಕಟ್ಟೆಚರ

ಕೆಜಿಎಫ್, ಏ.17- ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮತದಾರರು ನಿರ್ಭಯದಿಂದ ಭಾಗವಹಿಸುವಂತೆ ಕೆಜಿಎಫ್ ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಕೋರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪ್ರಯುಕ್ತ ಚುನಾವಣಾ ಆಯೋಗದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲೀ ಯಾವುದೇ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳಬಾರದು ಹಾಗೊಮ್ಮೆ ಎಲ್ಲಾದರೂ ದೂರು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವಿಡಲಾಗಿದೆ, ಆಯಾ ಠಾಣಾ ಗಡಿಗಳಲ್ಲಿ ಚೆಕ್‍ಪೋಸ್ಟ್ಗಳನ್ನು ನಿರ್ಮಿಸಿ ಒಳ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು, ಅಕ್ರಮವಾಗಿ ಯಾವುದೇ ಬೆಲೆಬಾಳುವ ವಸ್ತುಗಳು, ಉಡುಗೊರೆಗಳು, ಹಣವನ್ನು ಕಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಕೂಡಲೇ ಪ್ರಕರಣ ದಾಖಲಿಸಬೇಕು, ಮಾರಣಾಯುಧಗಳನ್ನು ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಕೊಂಡೊಯ್ಯದಂತೆ ಅಗತ್ಯ ಕ್ರಮವಿಡಬೇಕು, ಸಮಾಜಗಾತುಕ ಶಕ್ತಿಗಳು, ರೌಡಿ, ಗೂಂಡಾ ಪಟ್ಟಿಯಲ್ಲಿರುವವರ ಮೇಲೆ ತೀವ್ರ ನಿಗಾ ಇಡಬೇಕು, ಅಂತಹವರ ಚಲನ ವಲನಗಳ ಬಗ್ಗೆ ಸಾರ್ವಜನಿಕರ ಸಹಕಾರದಿಂದ ಮಾಹಿತಿ ಗೌಪ್ಯವಾಗಿ ಸಂಗ್ರಹಿಸಬೇಕೆಂದರು.

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು 454 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ 234 ಮತಗಟ್ಟೆಗಳಿದ್ದು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 220 ಮತಗಟ್ಟೆಗಳಿದ್ದು, ಇವುಗಳಲ್ಲಿ 90 ಮತಗಟ್ಟೆಗಳು ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು, ಕೆಜಿಎಫ್‍ನಲ್ಲಿ 46 ಹಾಗೂ ಬಂಗಾರಪೇಟೆಯಲ್ಲಿ 44 ಅತೀ ಸೂಕ್ಷ್ಮ ಮತಗಟ್ಟೆಗಳಿವೆ ಎಂದು ವಿವರಿಸಿದರು.

ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ಅತೀ ಸೂಕ್ಷ್ಮ, ಸೂಕ್ಷ್ಮ, ಹಾಗೂ ಸಾಮಾನ್ಯ ಪ್ರದೇಶಗಳಿಗೂ ಬಿಗಿ ಪೊಲೀಸ್ ಬಂದೋಬಸ್ತು ಒದಗಿಸಲಾಗಿದೆ.31 ಮೇಲುಸ್ತುವಾರಿ ಸ್ವ್ಕಾಡ್, 12 ಚೆಕ್‍ಪೋಸ್ಟ್ಗಳು, 2 ಎ.ಎಸ್.ಸಿ.ಟೀಮ್‍ಗಳು, 2 ಕ್ಯೂ.ಆರ್.ಟಿ.ಟೀಮ್‍ಗಳು, ಜಿಲ್ಲೆಯಾದ್ಯಂತ ಗಸ್ತುಗಳನ್ನು ವ್ಯವಸ್ಥೆ ಮಾಡಲಾಗಿದೆಯೆಂದು ಎಸ್ಪಿ ಕಾರ್ತಿಕ್‍ರೆಡ್ಡಿ ವಿವರಿಸಿದರು.

ಚುನಾವಣಾ ಬಂದೋಬಸ್ತಿಗಾಗಿ ಸಿವಿಲ್ ಪೊಲೀಸರು, ಗೃಹರಕ್ಷಕರು, ಡಿ.ಎ.ಆರ್.ಪೊಲೀಸರು ಸೇರಿದಂತೆ, ಕೆ.ಎಸ್.ಆರ್.ಪಿ., ಡಿಎಆರ್ ತುಕಡಿಗಳು ಸೇರಿದಂತೆ, ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಕೋಲಾರ ಲೋಕಸಭಾ ಚುನಾವಣೆ ಪ್ರಯುಕ್ತ ಕೆಜಿಎಫ್ ಪೊಲೀಸ್ ಜಿಲ್ಲೆಯ ಸರಹದ್ದಿನಲ್ಲಿರುವ ಮತಗಟ್ಟೆಗಳ ಪೈಕಿ ಸೂಕ್ಷ್ಮ ಹಾಗೂ ಅತೀಸೂಕ್ಷ್ಮವೆಂದು ಗುರ್ತಿಸಿರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಒಟ್ಟಾರೇ ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ಚುನಾವಣೆ ನಡೆಯಲು ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ ಅವರು ಕರೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ