ಮೈತ್ರಿ ಸರ್ಕಾರ ನಿಸ್ವಾರ್ಥವಾಗಿ ಸಾಲಮನ್ನಾ ಮಾಡಿದೆ-ರೈತ ಸಂಘ ಅಧ್ಯಕ್ಷ ಗಿರೀಶ್‍ಗೌಡ

ಬೆಂಗಳೂರು, ಏ.17- ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾದಲ್ಲಿ ನಿಸ್ವಾರ್ಥವಾಗಿ ನಡೆದುಕೊಂಡಿದ್ದು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದರ ಲಾಭವನ್ನು ಅನ್ನದಾತರು ಪಡೆದಿದ್ದಾರೆ.ಆದರೆ, ಕೆಲವರು ಸುಳ್ಳು ಹೇಳಿ ಜನರ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗಿರೀಶ್‍ಗೌಡ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲವರು ಕುಮಾರಸ್ವಾಮಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.

ಬಿಜೆಪಿ ಬೆಂಬಲಿತ ರೈತ ಮುಖಂಡ ಕೆ.ನಂಜುಂಡೇಗೌಡ ಅವರು ಸ್ವತಃ ಸಾಲಮನ್ನಾದ ಲಾಭ ಪಡೆದಿದ್ದರೂ ಸುಳ್ಳು ಆರೋಪ ಮಾಡಿದ್ದಾರೆ. ಅವರು ಬ್ಯಾಂಕ್‍ನಲ್ಲಿ ಬಾಕಿ ಉಳಿಸಿಕೊಂಡಿದ್ದ ಸುಮಾರು 66 ಸಾವಿರ ರೂ.ಮನ್ನಾ ಆಗಿದೆ.ಆದರೂ ಇದನ್ನು ಮರೆಮಾಚಿ ರೈತರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕುಮಾರಸ್ವಾಮಿ ಸರ್ಕಾರ ಸಾವಿರಾರು ಕೋಟಿ ರೂ.ಗಳ ಯೋಜನೆಯನ್ನು ಈಗಾಗಲೇ ಘೋಷಿಸಿದೆ.ಇದನ್ನು ರೈತರು ಮನಗಾಣಬೇಕು.

ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಮಂಡ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ನಮ್ಮ ಸಂಘಟನೆ ಕೂಡ ಇವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ರೈತರ ಸಾಲಮನ್ನಾ ಆಗಿದೆ.ಚುನಾವಣೆ ಹಿನ್ನೆಲೆಯಲ್ಲಿ ಪ್ರಕ್ರಿಯೆ ವಿಳಂಬವಾಗಿದ್ದು, ಇದಾದ ನಂತರ ಬಹುತೇಕ ಎಲ್ಲ ರೈತರಿಗೂ ಇದರ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ