ಪ್ರತಿಯೊಬ್ಬರು ನಿರ್ಭೀತಿಯಿಂದ ಮತದಾನ ಮಾಡಬೇಕು-ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್

ಬೆಂಗಳೂರು, ಏ.17- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.

ನಾಳೆ ಶಾಂತಿಯುತ ಮತದಾನಕ್ಕೆ ಸೂಕ್ತ ಭದ್ರತೆ, ಅಗತ್ಯ ಸಿಬ್ಬಂದಿ, ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತದಾರರು ಯಾವುದೇ ಭಯವಿಲ್ಲದೆ ಮತ ಚಲಾಯಿಸಬಹುದು. ಪ್ರತಿಯೊಬ್ಬ ಮತದಾರರು ಆಮಿಷ, ಒತ್ತಡಗಳಿಗೆ ಒಳಗಾಗದೆ ತಮ್ಮ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಬೇಕೆಂದು ಕರೆ ನೀಡಿದರು.

ನಾಳೆ ಮತದಾನ ನಡೆಯುವ 20,185 ಸ್ಥಳಗಳಲ್ಲಿ 30,164 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 387 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.62 ದಿವ್ಯಾಂಗರ ಮತಗಟ್ಟೆಗಳನ್ನು ತೆರೆಯಲಾಗಿದೆ. 2,11,405 ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಈಗಾಗಲೇ ಮತದಾರರಿಗೆ ಎಪಿಕ್ ಕಾರ್ಡ್ ಮತ್ತು ವೋಟರ್ ಸ್ಲಿಪ್ ನೀಡಲಾಗಿದೆ. ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. 700 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಮಾಡಲಾಗುತ್ತದೆ. ಕೇಂದ್ರದ 55 ಕಂಪೆನಿಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ. 2038 ಮೈಕ್ರೋ ವೀಕ್ಷಕರು, 14 ಪೆÇಲೀಸ್ ವೀಕ್ಷಕರು, 41 ಸಾಮಾನ್ಯ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ಹಂತದಲ್ಲಿ 2,67,51,893 ಮತದಾರರಿದ್ದು, 10,432 ಸೇವಾ ಮತದಾರರಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 241 ಅಭ್ಯರ್ಥಿಗಳಿದ್ದು, 17 ಮಂದಿ ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ಮತದಾನ ನಡೆಯುವ ಕ್ಷೇತ್ರಗಳಲ್ಲಿ ನಾಳೆ ಸಾರ್ವತ್ರಿಕ ರಜೆ ನೀಡಲಾಗಿದ್ದು, ನಿಷೇಧಾಜ್ಞೆ ಕೂಡ ಜಾರಿಯಲ್ಲಿದೆ. ಮದ್ಯ ಮಾರಾಟವೂ ಕೂಡ ನಿಷೇಧವಿದೆ.

ಕ್ರಿಟಿಕಲ್ ಮತಗಟ್ಟೆಗಳಿರುವ ಕಡೆಗಳಲ್ಲಿ ತೀವ್ರ ಕಣ್ಗಾವಲಿಡಲಾಗಿದ್ದು, ಕೇಂದ್ರ ಪಡೆ, ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುತ್ತದೆ.ದಿವ್ಯಾಂಗರಿಗೆ ಅನುಕೂಲವಾಗುವಂತೆ 26,855 ಭೂತಗನ್ನಡಿ ಒದಗಿಸಲಾಗಿದ್ದು, ವಯೋವೃದ್ಧರು ಸೇರಿದಂತೆ ಅಶಕ್ತರಿಗೆ ಮತದಾನ ಮಾಡಲು ಸಹಾಯಕರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮಾದರಿ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 898 ಕೇಸುಗಳನ್ನು ದಾಖಲಿಸಲಾಗಿದೆ. ಇದುವರೆಗೆ 18.3 ಕೋಟಿ ನಗದು ಸೇರಿದಂತೆ 42.67 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ