ಎಂ.ಬಿ.ಪಾಟೀಲ್ ಪತ್ರಿಕಾಗೋಷ್ಠಿಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ

ಬೆಂಗಳೂರು, ಏ.17-ಬಿಎಲ್‍ಡಿಇ ಲೆಟರ್‍ಹೆಡ್‍ನ್ನು ನಕಲು ಮಾಡಿ ಸೋನಿಯಾಗಾಂಧಿಯವರಿಗೆ ಪತ್ರ ಬರೆದಿರುವವರ ವಿರುದ್ಧ ಗೃಹ ಸಚಿವ ಎಂ.ಟಿ.ಪಾಟೀಲ್ ಅವರೇ ಪೊಲೀಸರಿಗೆ ದೂರು ನೀಡಿದ್ದು, ಹೆಚ್ಚಿನ ಮಾಹಿತಿ ನೀಡಲು ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ದಿಢೀರ್ ರದ್ದುಗೊಳಿಸುವಂತಾಗಿದೆ.

ಧಾರ್ಮಿಕ ವಿಚಾರ ಕುರಿತಂತೆ ಕೆಲವು ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ಎಂ.ಬಿ.ಪಾಟೀಲ್ ಹೆಸರಿನಲ್ಲಿ ಅವರ ಸಂಸ್ಥೆಯಾದ ಬಿಎಲ್‍ಡಿಇ ಅಸೋಸಿಯೇಷನ್ ಲೆಟರ್‍ಹೆಡ್‍ನಲ್ಲಿ ಸೋನಿಯಾಗಾಂಧಿಯವರಿಗೆ ಪತ್ರವೊಂದು ಬರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಹಾನಿ ಉಂಟು ಮಾಡಿದ್ದು, ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೂ ಗುರಿಯಾಗಿತ್ತು. ಹಾಗಾಗಿ ಖುದ್ದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರೇ ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಬಿಎಲ್‍ಡಿಇ ಸಂಸ್ಥೆಯ ಲೆಟರ್‍ಹೆಡ್ ನಕಲಿ ಎಂದು ಎಂ.ಬಿ.ಪಾಟೀಲ್ ನಕಲಿ ಎಂದು ಸ್ಪಷ್ಟಪಡಿಸಿದ್ದು, ಆ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಇಂದು ಬೆಂಗಳೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಚುನಾವಣಾ ಆಯೋಗ ಅದಕ್ಕೆ ಬ್ರೇಕ್ ಹಾಕಿದೆ.

ಮತದಾನದ ಕೊನೆಯ 48 ಗಂಟೆಗಳ ಅವಧಿಯಲ್ಲಿ ಯಾವುದೇ ಪತ್ರಿಕಾಗೋಷ್ಠಿಗಳನ್ನು ನಡೆಸುವಂತಿಲ್ಲ. ಹಾಗಾಗಿ ಎಂ.ಬಿ.ಪಾಟೀಲ್ ಯಾವುದೇ ಪತ್ರಿಕಾಗೋಷ್ಠಿಯನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು.

ಹೀಗಾಗಿ ಇಂದು 12 ಗಂಟೆಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ದಿಢೀರ್ ರದ್ದುಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ