ಬೆಂಗಳೂರು, ಏ.17- ಲೋಕಸಭೆ ಚುನಾವಣೆಗೆ ಕೆಎಸ್ಆರ್ಟಿಸಿಯ ಹೆಚ್ಚಿನ ಬಸ್ಗಳನ್ನು ಒದಗಿಸಿರುವುದರಿಂದ ಇಂದು ಮತ್ತು ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವುದನ್ನು ಮನಗಂಡು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯ ಸುಮಾರು 200 ಬಸ್ಗಳನ್ನು ಹೆಚ್ಚುವರಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ, ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಬಸ್ಗಳ ಅವಶ್ಯಕತೆ ಕಂಡುಬಂದಲ್ಲಿ ಅಗತ್ಯಕ್ಕನುಗುಣವಾಗಿ ಬಿಎಂಟಿಸಿ ಬಸ್ಗಳ ಸೇವೆ ಒದಗಿಸಲು ಯೋಜಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಮೊದಲ ಹಂತದ ಚುನಾವಣೆಗೆ ಕೆಎಸ್ಆರ್ಟಿಸಿಯ 3300 ಬಸ್ಗಳನ್ನು ಒದಗಿಸಿರುವುದರಿಂದ ದೈನಂದಿನ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಜನದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಅಗತ್ಯಕ್ಕನುಗುಣವಾಗಿ ತಾಲೂಕು ಕೇಂದ್ರದಿಂದ ಇತರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೂ ಬಸ್ ಸೇವೆ ಕಲ್ಪಿಸಲಾಗುತ್ತಿದೆ.
ಕೆಎಸ್ಆರ್ಟಿಸಿಯ ಸುಮಾರು 8705 ಬಸ್ಗಳ ಪೈಕಿ 3314 ಬಸ್ಗಳನ್ನು ಲೋಕಸಭೆ ಚುನಾವಣಾ ಕಾರ್ಯ ಹಾಗೂ ಪೊಲೀಸ್ ಇಲಾಖೆಗಾಗಿ ನೀಡಲಾಗಿದೆ.
ಅದೇ ರೀತಿ ಬಿಎಂಟಿಸಿಯ ಸುಮಾರು 6200 ಬಸ್ಗಳಲ್ಲಿ 1700 ಬಸ್ಗಳನ್ನು ಚುನಾವಣಾ ಕಾರ್ಯಕ್ಕೆ ನೀಡಲಾಗಿದೆ. ಪ್ರಯಾಣಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಗರಿಷ್ಠ ಮಟ್ಟದ ಪ್ರಯತ್ನ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಮೂಲಗಳು ಸ್ಪಷ್ಟಪಡಿಸಿವೆ.