ಬೆಂಗಳೂರು, ಏ.16- ರಾಜ್ಯ ಕಳೆದ 8 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2018ನೇ ಸಾಲಿನಲ್ಲಿ ಚಿಕ್ಕಮಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಯಾವಭಾಗದಲ್ಲೂ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿನವರೆಗೂ ನಕ್ಸಲರು ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ನಡೆಸಿರುವುದಿಲ್ಲ. ಅಲ್ಲದೆ, ಯಾವುದೇ ಪ್ರತಿಭಟನೆ, ಕರಪತ್ರ ಹಂಚುವಿಕೆ, ಚುನಾವಣಾ ವಿರೋಧಿ ಹೇಳಿಕೆಗಳಂತಹ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಿರುವ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮಲೆನಾಡು ಪ್ರದೇಶ ಮತ್ತು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸಂಪರ್ಕಿಸುವ ತ್ರಿಸಂಧಿ ಪ್ರದೇಶದಲ್ಲಿ ಕ್ಷೇತ್ರ ಪ್ರಾಬಲ್ಯ ಸಾಧಿಸುವ ಸಲುವಾಗಿ ದಿನನಿತ್ಯ ಕಾರ್ಯಾಚರಣೆ ಮಾಡಲಾಗಿದೆ ಹಾಗೂ ರಾತ್ರಿ ವೇಳೆ ಗಸ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ವ್ಯಾಪ್ತಿಗಳಲ್ಲಿ ನಡೆಯುವ ಚುನಾವಣಾ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದಲ್ಲದೆ, ಗಸ್ತನ್ನು ಸಹ ತೀವ್ರಗೊಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.