ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯ; ಬಳಿಕ ಮನೆ ಮನ ಪ್ರಚಾರ

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಿಗೆ ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಇಡೀ ದಿನ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ 48 ಗಂಟೆಗಳ ಮುಂಚೆ ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಹೀಗಾಗಿ ಕೊನೇ ದಿನ ಪ್ರಚಾರಕ್ಕೆ ಬರುವಂತೆ ಅಭ್ಯರ್ಥಿಗಳು ನಾಯಕರ ದುಂಬಾಲು ಬಿದ್ದಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಹಿತ ಎಲ್ಲ ನಾಯಕರು ಮಂಗಳವಾರ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್‌ ಪರ ಬೃಹತ್‌ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಅದೇ ರೀತಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸಹ ಬಹಿರಂಗ ಸಭೆ ನಡೆಸುತ್ತಿದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ದಕ್ಷಿಣ, ಉತ್ತರ, ಕೇಂದ್ರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ