ಸಿಎಂ ಕುಮಾರಸ್ವಾಮಿಯನ್ನು ಬೆಂಬಿಡದ ಐಟಿ ಭೂತ; ಬೆಳಗ್ಗೆಯೇ ಹಾಸನದ 5 ಕಡೆ ದಾಳಿ ನಡೆಸಿದ ಅಧಿಕಾರಿಗಳು

ಹಾಸನ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಹಾಗೂ ಅವರ ಆಪ್ತರನ್ನು ಗುರಿಯಾಗಿಸಿ ಬೆಂಗಳೂರು, ಮಂಡ್ಯ ಹಾಗೂ ಹಾಸನದಲ್ಲಿ ನಡೆಯುತ್ತಿರುವ ಸರಣಿ ಐಟಿ ದಾಳಿ ಮಂಗಳವಾರವೂ ಮುಂದುವರೆದಿದೆ.

ಹಾಸನ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಹೊಳೆನರಸೀಪುರ ತಾಪಂ, ಮಾಜಿ ಅಧ್ಯಕ್ಷ ನ್ಯಾಮನಹಳ್ಳಿ ಅನಂತಕುಮಾರ್ ಅವರ ವಿದ್ಯಾನಗರ ಮನೆ, ಜಿಪಂ ಮಾಜಿ ಸದಸ್ಯ ದೇವೇಗೌಡರ ಸಹೋದರನ ಮಗ ಹರದನಹಳ್ಳಿ ಪಾಪಣ್ಣಿ ಮನೆ, ವಿದ್ಯಾನಗರದ ಗುತ್ತಿಗೆದಾರ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಾರ್ಲೇ ಇಂದ್ರೇಶ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಮ್ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಇದು ಸಾಮಾನ್ಯವಾಗಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು  ಇಕ್ಕಟ್ಟಿಗೆ ಸಿಲುಕಿಸಿದೆ. ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಶಾತಾಯಗತಾಯ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಜೆಡಿಎಸ್ ಪಾಳಯಕ್ಕೆ ಮುಂದುವರೆಯುತ್ತಿರುವ ಐಟಿ ಶಾಕ್ ನುಂಗಲಾರದ ತುತ್ತಾಗಿದೆ.

ಹಾಸನ ಜಿಲ್ಲೆಯ ಇತಿಹಾಸದಲ್ಲೇ ನಡೆದಿದೆ ಎನ್ನಲಾದ ಅತಿದೊಡ್ಡ ಐಟಿ ದಾಳಿ ಇದಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಮಗೆ ನೀಡಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ತಾಕೀತು ಮಾಡಿದ್ದಾರೆ.

ಐಟಿ ಅಧಿಕಾರಿಗಳಿಗೆ ಇರಿಸುಮುರಿಸು : ಕಳೆದ ಐದು ದಿನಗಳ ಹಿಂದೆ ತಾವು ಐಟಿ ಇಲಾಖೆ ಅಧಿಕಾರಿಗಳು ಎಂದು ಇಬ್ಬರು ಅನಾಮಿಕ ವ್ಯಕ್ತಿಗಳು ಹದರನಹಳ್ಳಿ ಈಶ್ವರ ದೇವಾಲಯವನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೆ ಅರ್ಚಕನನ್ನೂ ವಿಚಾರಣೆಗೆ ಒಳಪಡಿಸಿದ್ದರು.

ಈ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಐಟಿ ಇಲಾಖೆ ತಮ್ಮ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸ್ಪಷ್ಟಣೆ ನೀಡಿತ್ತು.

ಈ ನಕಲಿ ದಾಳಿಯ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ, ಹೀಗೆ ನಕಲಿ ದಾಳಿ ನಡೆಸಿದವರ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮತ್ತೆ ನಡೆಯಬಹುದಾದ ಇಂತಹ ನಕಲಿ ದಾಳಿಯ ಕುರಿತು ಹದ್ದಿನ ಕಣ್ಣಿಟ್ಟಿದ್ದ ಅಧಿಕಾರಿಗಳು ಇಂದು ಐಟಿ ಇಲಾಖೆ ದಾಳಿ ನಡೆಸಿದ್ದ ಸ್ಥಳಕೆ ತೆರಳಿದ್ದರು. ಅಲ್ಲದೆ ಐಟಿ ಇಲಾಖೆ ಅಧಿಕಾರಿಗಳಿಗೆ ಅವರ ಗುರುತಿನ ಚೀಟಿ ನೀಡುವಂತೆ ಸ್ಥಳೀಯ ಚುನಾವಣಾ ಅಧಿಕಾರಿ ಮನವಿ ಮಾಡಿದ್ದರು. ಕೊನೆಗೆ ಐಟಿ ಅಧಿಕಾರಿಗಳು ಕಾರಿನಿಂದ ತಮ್ಮ ಗುರುತಿನ ಚೀಟಿ ತಂದು ತೋರಿಸಿದ ನಂತರವಷ್ಟೆ ಅವರಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಲಾಯಿತು.

ಈ ಪ್ರಸಂಗ ಸಾಮಾನ್ಯವಾಗಿ ಐಟಿ ಇಲಾಖೆ ಅಧಿಕಾರಿಗಳಲ್ಲಿ ಇರಿಸು-ಮುರಿಸು ಉಂಟು ಮಾಡಿತ್ತು. ಅಲ್ಲದೆ ಈ ಕುರಿತು ಚುನಾವಣಾ ಫೈಯಿಂಗ್ ಸ್ಕ್ವಾಡ್ ಅಧಿಕಾರಿ ಹೇಮಂತ್ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ