ಮೈಸೂರು, ಏ.16- ಮಂಡ್ಯ ಮತ್ತು ಹಾಸನದಲ್ಲಿ ದೋಸ್ತಿಗಳ ನಡುವೆ ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲ. ಇದು ನಮಗೆ ಅನುಕೂಲವಾಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೇ 23ರಂದು ಫಲಿತಾಂಶ ಪ್ರಕಟವಾದ ಕೂಡಲೇ ದೋಸ್ತಿ ಪಕ್ಷಗಳ ನಡುವೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ದೋಸ್ತಿ ವರ್ಸಸ್ ಬಿಜೆಪಿ ಹೋಗಿ ಈಗ ದೋಸ್ತಿ ವರ್ಸಸ್ ದೋಸ್ತಿ ಆಗಿದೆ. ಅವರವರಲ್ಲೇ ಕಿತ್ತಾಟ ಇರುವುದರಿಂದ ತಾವಾಗೇ ಹೋಗುತ್ತಾರೆ. ಅದಕ್ಕಾಗಿ ಬಿಜೆಪಿ ಏನೂ ಪ್ರಯತ್ನವನ್ನೇ ಪಡಬೇಕಿಲ್ಲ ಎಂದು ಮೈತ್ರಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.
ಕುಮಾರಪರ್ವ ಪ್ರಾರಂಭವಾದುದೇ ಚಾಮರಾಜನಗರದಿಂದ. ಇಂದು ದೋಸ್ತಿಗಳಾಗಿರುವವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಡೆಸಿದ ವಾಗ್ದಾಳಿಗಳನ್ನು ಉಲ್ಲೇಖಿಸಲು ಸಾಧ್ಯವಿಲ್ಲ. ಅಂತಹ ಕೆಳಮಟ್ಟದ ಮಾತುಗಳು ಕೇಳಿಬಂದಿದ್ದವು ಎಂದು ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮೇಲ್ವರ್ಗ, ಕೆಳವರ್ಗ, ದಲಿತ ವಿರೋಧಿ, ಅಹಿಂದ ಎಂಬುದೆಲ್ಲ ಚುನಾವಣಾ ಪ್ರಚಾರದ ಪದಗಳು. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ಮಾತುಗಳು ಕೇಳಿಬರುತ್ತಿವೆ ಎಂದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಒಂದು ರೀತಿ ವಿದೂಷಕನಂತೆ. ಸಿದ್ದರಾಮಯ್ಯನವರ ಆಸ್ಥಾನದಲ್ಲಿ ಅವರು ವಿದೂಷಕ ಎಂದು ಶ್ರೀನಿವಾಸ ಪ್ರಸಾದ್ ಗೇಲಿ ಮಾಡಿದರು.
ಮಾಧ್ಯಮ ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ಬಾಬು, ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.