ಕರ್ನಾಟಕ ಭೂಪಟದಲ್ಲಿ ಮಂಡ್ಯ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ

ಮಂಡ್ಯ, ಏ.16-ಮಂಡ್ಯ ಜಿಲ್ಲೆಯು ಕರ್ನಾಟಕದ ಕಬ್ಬಿನ ಕಣಜ, ಭತ್ತದ ಖಜಾನೆ. ಮಂಡ್ಯ ಅಂದ ಕೂಡಲೇ ನೆನಪಾಗುವುದು ಕಾವೇರಿ ನದಿ. ಕರ್ನಾಟಕದ ಜೀವನದಿಗಳಲ್ಲಿ ಒಂದಾದ ಕಾವೇರಿ ನೀರನ್ನು ಸಂಗ್ರಹಿಸುವ ಕೃಷ್ಣರಾಜಸಾಗರ ಅಣೆಕಟ್ಟಿರುವುದು ಮಂಡ್ಯ ಜಿಲ್ಲೆಯಲ್ಲಿ.

2011ರ ಜನಗಣತಿ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 18,05,769 ಜನರಿದ್ದು, ಈ ಪೈಕಿ ಬಹಳಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಈ ಜಿಲ್ಲೆಯಲ್ಲಿ ಶೇ.83.24 ಮಂದಿ ಸಾಕ್ಷರರಿದ್ದಾರೆ. ಜಿಲ್ಲೆಯ ಗಡಿಯು ತುಮಕೂರು, ಚಾಮರಾಜನಗರ, ಮೈಸೂರು, ಹಾಸನ, ರಾಮನಗರ ಜಿಲ್ಲೆಗಳಿಗೆ ಹೊಂದಿಕೊಂಡಿದೆ. ಇಲ್ಲಿ ಕಾವೇರಿ ಮಾತ್ರವಲ್ಲದೆ ಹೇಮಾವತಿ, ಶಿಂಷಾ, ಲೋಕಪಾವನಿ, ವೀರ ವೈಷ್ಣವಿ ನದಿಗಳು ಹರಿಯುತ್ತವೆ. ಏಳು ತಾಲ್ಲೂಕುಗಳಿಂದ ಕೂಡಿದ ಜಿಲ್ಲೆಯಲ್ಲಿ ಎರಡು ಉಪ ವಿಭಾಗಗಳಿವೆ.

ಕರ್ನಾಟಕ ಭೂಪಟದಲ್ಲಿ ಮಂಡ್ಯ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಮಹಾನಗರದ ನಾಗರಿಕರ ಕುಡಿಯುವ ನೀರಿನ ಅಗತ್ಯ ಪೂರೈಸುವ ಕಾವೇರಿಯು ಕೃಷ್ಣರಾಜ ಸಾಗರದಿಂದ ಹರಿದುಬರುತ್ತದೆ. ಈ ದೃಷ್ಟಿಯಿಂದ ಮಂಡ್ಯಕ್ಕೆ ಅತ್ಯಂತ ಮಹತ್ತರವಾದ ಸ್ಥಾನ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿಯು ವಿರಾಜಮಾನನಾಗಿದ್ದು, ಚೆಲುವನಾರಾಯಣಸ್ವಾಮಿಯ ನೆಲೆವೀಡಾದ ಮೇಲುಕೋಟೆ ಇರುವುದು ಕೂಡ ಇದೇ ಜಿಲ್ಲೆಯಲ್ಲಿ. ಮಂಡ್ಯವು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದೆ.

ಭತ್ತ, ಕಬ್ಬು, ಜೋಳ, ಹತ್ತಿ, ಬಾಳೆ, ರಾಗಿ, ತೆಂಗು, ಬೇಳೆಕಾಳುಗಳು, ತರಕಾರಿ ಇವು ಈ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು.

ಎಚ್.ಎಲ್.ನಾಗೇಗೌಡ, ವಿಜಯ ನಾರಸಿಂಹ, ಜಯಲಕ್ಷ್ಮಿ ಸೀತಾಪುರ, ಅನಸೂಯ ಶಂಕರ್ (ತ್ರಿವೇಣಿ), ಕೆ.ಎಸ್.ನರಸಿಂಹಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ್, ಅಂಬರೀಷ್ ಮುಂತಾದ ಹಲವು ಖ್ಯಾತನಾಮರು ಮಂಡ್ಯ ಜಿಲ್ಲೆಗೆ ಸೇರಿದವರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಂಡ್ಯ ಜಿಲ್ಲೆಯವರು ಅದ್ಭುತ ಪರಾಕ್ರಮ ಮೆರೆದಿದ್ದಾರೆ. ಈ ಜನರ ರಕ್ತದಲ್ಲಿ ಹೋರಾಟ ಮನೋಭಾವ ಮನೆ ಮಾಡಿದೆ. ಈ ಜಿಲ್ಲೆಯಲ್ಲಿರುವ ಸತ್ಯಾಗ್ರಹ ಸೌಧವು ಇದಕ್ಕೆ ಸಾಕ್ಷಿ.

ಆರ್ಥಿಕವಾಗಿ, ರಾಜಕೀಯವಾಗಿ ವಿಶಿಷ್ಟ ಸ್ಥಾನಮಾನ ಹೊಂದಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತುಂಬಾ ಮಹತ್ವವಿದೆ. ಲೋಕಸಭೆಯಲ್ಲಿ ಈ ಜಿಲ್ಲೆಯನ್ನು ಯಾರು ಪ್ರತಿನಿಧಿಸುತ್ತಾರೆ ಎನ್ನುವುದನ್ನು ಕರ್ನಾಟಕದವರು ಮಾತ್ರವಲ್ಲ, ತಮಿಳುನಾಡು, ಪುದುಚೇರಿ, ಕೇರಳದವರೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಈ ಎಲ್ಲ ರಾಜ್ಯಗಳಿಗೂ ಕಾವೇರಿಯ ನೀರು ಅತ್ಯಗತ್ಯ. ಅದರ ಕೇಂದ್ರ ಬಿಂದು ಮಂಡ್ಯ. ಹಾಗಾಗಿ ಕೌತುಕ ಜಾಸ್ತಿ.

ಕಾವೇರಿಯೊಂದಿಗೆ ಮಂಡ್ಯದ ಜನರ ಭಾವನಾತ್ಮಕ ಸಂಬಂಧವಿದೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂಬ ಸೂಚನೆ ಸಿಕ್ಕಿದ ಕೂಡಲೇ ಅದರ ರಕ್ಷಣೆಗಾಗಿ ಜಿಲ್ಲೆಯ ಜನರು ಪ್ರಾಮಾಣಿಕ ಹೋರಾಟ ನಡೆಸಿದ ಹಲವಾರು ಉದಾಹರಣೆಗಳಿವೆ. ಕಾವೇರಿಗಾಗಿ ಇಡೀ ಜಿಲ್ಲೆಯ ಜನರು ಜಾತಿ-ಮತ-ಪಕ್ಷಭೇದ ಮರೆತು ಒಂದಾಗುತ್ತಾರೆ.

ಮಂಡ್ಯ ಜಿಲ್ಲೆಯು ಮಣ್ಣಿನ ಮಕ್ಕಳ ತವರು. ರೈತರ ಹಿತರಕ್ಷಣೆಗಾಗಿ ಪ್ರಾರಂಭವಾಗುವ ಹೋರಾಟಗಳು ಜನ್ಮ ತಳೆಯುವುದು ಇದೇ ಜಿಲ್ಲೆಯಲ್ಲಿ. ನಾಡು ಕಂಡ ಹಲವು ರೈತ ಮುಖಂಡರ ಕರ್ಮಭೂಮಿ ಮಂಡ್ಯ. ಇಲ್ಲಿ ಏಳುವ ಹೋರಾಟದ ಕೂಗು ಮಿಂಚಿನ ವೇಗದಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪುತ್ತದೆ. ರೈತ ಅಂದರೆ ಮಂಡ್ಯ ಅನ್ನುವ ಮಟ್ಟಿಗೆ ಶಾಶ್ವತ ಛಾಪು ಮೂಡಿಬಿಟ್ಟಿದೆ.

ಮಂಡ್ಯ ಜಿಲ್ಲೆಯ ಮತದಾರರು ತೆಗೆದುಕೊಳ್ಳುವ ನಿರ್ಧಾರವು ಇಡೀ ರಾಜ್ಯದ ರೈತರ ನಿಲುವಿನ ಮುನ್ನುಡಿ ಎಂಬ ನಂಬಿಕೆ ಇದೆ. ಇದರಿಂದಾಗಿ ರಾಜ್ಯ ಹಾಗೂ ನೆರೆರಾಜ್ಯದ ನಾಗರಿಕರು ಮಂಡ್ಯ ಜಿಲ್ಲೆಯ ಜನರು ನೀಡುವ ಫಲಿತಾಂಶವನ್ನು ಕಾತರದಿಂದ ಎದುರು ನೋಡುತ್ತಾರೆ.

ಸಂಸತ್‍ನಲ್ಲಿ ಕೂಡ ಈ ಜಿಲ್ಲೆಯ ಪ್ರತಿನಿಧಿಯು ಮಾಡುವ ಭಾಷಣ, ಮಂಡಿಸುವ ನಿಲುವಳಿಗೆ ಬಹಳ ಮಹತ್ವವಿದೆ. ಈ ಜಿಲ್ಲೆಯಿಂದ ಎಂ.ಕೆ.ಶಿವನಂಜಪ್ಪ, ಎಸ್.ಎಂ.ಕೃಷ್ಣ, ಕೆ.ಚಿಕ್ಕಲಿಂಗಯ್ಯ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಕೆ.ಆರ್. ಪೇಟೆ ಕೃಷ್ಣ ಮುಂತಾದ ಧೀಮಂತರು ಲೋಕಸಭೆಗೆ ಆಯ್ಕೆಯಾಗಿ ರಾಜ್ಯದ ರೈತರ ಹಿತರಕ್ಷಣೆಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯು ಹೆಚ್ಚಿನ ಮಹತ್ವ ಪಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ