ನವದೆಹಲಿ, ಏ.16-ಕದನಕೌತುಕ ಕೆರಳಿಸಿರುವ 17ನೆ ಲೋಕಸಭಾ ಚುನಾವಣೆಯ 2ನೆ ಹಂತದ ಮತದಾನ ಏ.18ರಂದು ನಡೆಯಲಿದ್ದು, ಭಾರೀ ಸ್ಪರ್ಧೆ-ಪ್ರತಿಸ್ಪರ್ಧೆಗೆ ಅಖಾಡ ಸಜ್ಜಾಗಿದೆ.
ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 97 ಕ್ಷೇತ್ರಗಳಲ್ಲಿ ಗುರುವಾರ ನಡೆಯಲಿರುವ ಚುನಾವಣೆಗೆ ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇನ್ನು ಮನೆ ಮನೆ ಪ್ರಚಾರ ಆರಂಭವಾಗಲಿದೆ.
ತಮಿಳುನಾಡಿನ ಎಲ್ಲ 30 ಲೋಕಸಭಾ ಕ್ಷೇತ್ರಗಳು, ಕರ್ನಾಟಕದ 14, ಮಹಾರಾಷ್ಟ್ರದ 10, ಉತ್ತರ ಪ್ರದೇಶದ 8, ಅಸ್ಸೋಂ, ಬಿಹಾರ ಮತ್ತು ಒಡಿಶಾದ ತಲಾ 5, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ಜಮ್ಮು-ಕಾಶ್ಮೀರದ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದೊಂದು ಕ್ಷೇತ್ರಗಳಲ್ಲಿ ಏ.18ರಂದು ಎರಡನೆ ಹಂತದ ಮತದಾನ ನಡೆಯಲಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಆಯಾ ರಾಜ್ಯಗಳ ಪ್ರಮುಖ ಪ್ರಾದೇಶಿಕ ಪಕ್ಷಗಳು ಮತದಾರರನ್ನು ಓಲೈಸುವ ಕೊನೆ ನಿಮಿಷಗಳ ಯತ್ನ ಮುಂದುವರಿಸಿದವು. ಎಲ್ಲ 97 ಲೋಕಸಭಾ ಕ್ಷೇತ್ರಗಳಲ್ಲೂ ಕೊನೆ ದಿನದ ಅಬ್ಬರದ ಪ್ರಚಾರ ಕಾರ್ಯಗಳು ಬಿರುಸಿನಿಂದ ನಡೆದವು.
ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಪರ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದರು.
ಒಡಿಶಾ ರಾಜಧಾನಿ ಭುವನೇಶ್ವರ ಮತ್ತು ಸಂಬಾಲ್ಪುರ್ನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ರ್ಯಾಲಿಗಳಲ್ಲಿ ಮೋದಿ ಪಾಲ್ಗೊಂಡರು.
ಛತ್ತೀಸ್ಗಢದ ರಾಜಧಾನಿ ರಾಯ್ಪುರ್ ಜಿಲ್ಲೆಯಲ್ಲಿ ಪ್ರಧಾನಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಕೇರಳದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ಕಾಂಗ್ರೆಸ್ ಪರ ಮತ ಹಾಕುವಂತೆ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದರು.
ಮೊದಲ ಹಂತದಲ್ಲಿ ಚುನಾವಣೆ ವೇಳೆ ಆಂಧ್ರಪ್ರದೇಶ ಸೇರಿದಂತೆ ಕೆಲವೆಡೆ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು.
ಎರಡನೆ ಹಂತದ ಚುನಾವಣೆ ವೇಳೆ ಇಂಥ ಅಹಿತಕರ ಘಟನೆಗಳು ಮರುಕಳಿಸದಂತೆ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗುವುದು.
ಏ.11ರಂದು ನಡೆದ ಪ್ರಥಮ ಹಂತದ ಮತದಾನದ ವೇಳೆ ಬಹುತೇಕ ಕಡೆ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ದೋಷದಿಂದಾಗಿ ಕೆಲಕಾಲ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಎರಡನೆ ಹಂತದಲ್ಲಿ ಇಂಥ ಗೊಂದಲಗಳು ಪುನರಾವರ್ತನೆಯಾಗದಂತೆ ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಏ.11ರಂದು ಆರಂಭವಾದ ಲೋಕಸಭಾ ಸಮರ ಮೇ 19ರ ವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ.ಮೇ 23ರಂದು 17ನೆ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.