ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಮತಾದನಕ್ಕೆ ಮೂರು ದಿನ ಬಾಕಿ ಇರುವಾಗಲೇ ಕಾಂಗ್ರೆಸ್-ಜೆಡಿಎಸ್ ವರಿಷ್ಠರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋಲಾರದಲ್ಲಿ ಮೈತ್ರಿಕೂಟ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸಂಸದ ಕೆ.ಎಚ್ ಮುನಿಯಪ್ಪನವರಿಗೆ ಸ್ಥಳೀಯ ಜೆಡಿಎಸ್ ನಾಯಕರು ಯಾವುದೇ ರೀತಿಯ ಬೆಂಬಲ ಘೋಷಿಸಿಲ್ಲ ಎನ್ನಲಾಗಿದೆ. ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ನಿರ್ಧಾರ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಸ್ಥಳೀಯ ಜೆಡಿಎಸ್ ನಾಯಕರು ಮೈತ್ರಿಧರ್ಮ ಪಾಲನೆ ಮಾಡದೇ ಕಾಂಗ್ರೆಸ್ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆಗೂ ಕ್ಯಾರೇ ಎನ್ನದ ಸ್ಥಳೀಯ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು, ಕೆ.ಎಚ್ ಮುನಿಯಪ್ಪನವರ ಪರವಾಗಿ ಪ್ರಚಾರ ಶುರು ಮಾಡಿಲ್ಲ. ಹಾಗಾಗಿ ಕೋಲಾರದಲ್ಲಿ ತುಸು ಗೊಂದಲ ವಾತಾವರಣ ನಿರ್ಮಾಣವಾಗಿದೆ. ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೇವಲ ಮೂರು ದಿನ ಬಾಕಿಯಿದ್ದರೂ, ಶ್ರೀನಿವಾಸಗೌಡ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ. ಸ್ಥಳೀಯ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದು, ಕನಿಷ್ಠ ಮೈತ್ರಿಧರ್ಮ ಪಾಲನೆ ಮಾಡಬೇಕೆಂದು ಸೂಚಿಸಿಲ್ಲ ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶ್ರೀನಿವಾಸ ಗೌಡ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ. ಏನೇ ಆಗಲೀ ಕಾರ್ಯಕರ್ತರ ನಿರ್ಧಾರವೇ ನನ್ನ ನಿರ್ಧಾರ ಎನ್ನುತ್ತಿರುವ ಇವರು, ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಾರೋ ಎಲ್ಲವೋ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿದೆ. ಇವರು ಯಾವುದೇ ನಿರ್ಧಾರ ಪ್ರಕಟಿಸದೇ ಇರುವ ಕಾರಣ ಸ್ಥಳೀಯ ಜೆಡಿಎಸ್ ಕಾರ್ಯಕರ್ತರಲ್ಲಿಯೂ ಗೊಂದಲ ಹೆಚ್ಚಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಹಾಲಿ ಸಂಸದ ಕೆ.ಎಚ್ ಮುನಿಯಪ್ಪ ವಿರುದ್ಧ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಈ ಸಲ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಶ್ರೀನಿವಾಸಗೌಡರು ಆಗಮಿಸುವುದು ಬಹುತೇಕ ಅನುಮಾನವೇ ಎಂದು ಹೇಳಲಾಗಿತ್ತು. ಕೋಲಾರ ರಾಜಕೀಯ ವಲಯದಲ್ಲಿ ಕೆಎಚ್ ಮುನಿಯಪ್ಪನವರ ಬದ್ದ ವೈರಿಯಾಗಿರುವ ಶ್ರೀನಿವಾಸಗೌಡರು, ವರಿಷ್ಠರ ಸೂಚನೆಗೂ ಕ್ಯಾರೇ ಎನ್ನುತ್ತಿಲ್ಲ ಎಂದು ತಿಳಿದು ಬಂದಿದೆ.
ಈ ಹಿಂದೆಯೂ ಕೆ.ಎಚ್. ಮುನಿಯಪ್ಪ ವಿರುದ್ಧ ಬಂಡಾಯವೆದ್ದ ಸ್ಪೀಕರ್ ರಮೇಶ್ ಕುಮಾರ್ ಬಣ ಕೋಲಾರದಿಂದ ಟಿಕೆಟ್ ನೀಡದಂತೆ ಹೈಕಮಾಂಡಿಗೆ ದೂರು ನೀಡಿದ್ದರು. ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾದ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಕೋಲಾರ ನಿಯೋಗ ಎಲ್ಲರ ವಿರೋಧ ಕಟ್ಟಿಕೊಂಡಿರುವ ಕೆ.ಎಚ್. ಮುನಿಯಪ್ಪಗೆ ಗೆಲುವು ಕಷ್ಟ. ಹೀಗಾಗಿ ಅವರಿಗೆ ಟಿಕೆಟ್ ನೀಡಬಾರದು. ಅವರ ಬದಲಿಗೆ ಬೇರೆಯವರಿಗೆ ನೀಡಿ ಎಂದು ಹೈಕಮಾಂಡಿಗೆ ದೂರು ನೀಡಿತ್ತು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ, ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಕಾಂಗ್ರೆಸ್ ಶಾಸಕರಾದ ವಿ ಮುನಿಯಪ್ಪ, ಎಸ್ ಎನ್ ನಾರಾಯಣಸ್ವಾಮಿ, ಸ್ಥಳೀಯ ಮುಖಂಡ ಶ್ರೀನಿವಾಸ್, ನಸೀರ್ ಅಹಮದ್ ಸೇರಿದಂತೆ ಹಲವರು ಕೈಜೋಡಿಸಿದ್ದರು.