ಬೆಂಗಳೂರು,ಏ.14- ಶತಾಯಗತಾಯ ಪುತ್ರನನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನಲ್ಲಿರುವ ಮಲೇಮಹದೇಶ್ವರನ ಸನ್ನಿಧಿಯಲ್ಲಿ ತಮ್ಮ ಪುತ್ರ, ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವಿಗೆ ಪ್ರಾರ್ಥಿಸಿದರು.
23ರಂದು ಶಿವಮೊಗ್ಗದಲ್ಲಿ ಮತದಾನ ನಡೆಯಲಿದ್ದು, ಈ ಬಾರಿ ಬಿ.ವೈ.ರಾಘವೇಂದ್ರ ಅವರಿಗೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
ಜ್ಯೋತಿಷಿಯೊಬ್ಬರು ಮಲೆಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ಎದುರಾಗಿರುವ ಕಂಟಕಗಳು ನಿವಾರಣೆಯಾಗಲಿವೆ ಎಂದು ಸಲಹೆ ನೀಡಿದ್ದರು.
ಅದರಂತೆ ಇಂದು ಬಿ.ಎಸ್.ಯಡಿಯೂರಪ್ಪ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲ್ಲುವುದು ನೂರಕ್ಕೆ 100ರಷ್ಟು ಖಚಿತ. ಯಾರು ಏನೇ ಅಪಪ್ರಚಾರ ನಡೆಸಿದರೂ ಜಿಲ್ಲೆಯ ಜನತೆ ನಮ್ಮ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಚುನಾವಣೆಯಲ್ಲೂ ನಮ್ಮ ವಿರುದ್ಧ ಎದುರಾಳಿಗಳು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರ್ವೆ ಸಾಮಾನ್ಯ.ಅದರ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಒಂದೆಡೆ 5 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯಿಂದ ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ಗೆ ಹಿನ್ನಡೆಯಾಗುವುದು ಖಚಿತ. ಎರಡು ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಕಾರ್ಯಕರ್ತರು ಹಾದಿಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಅವರ ಭಿನ್ನಮತವೇ ನಮಗೆ ವರದಾನ ಎಂದರು.
ಇನ್ನು ಯಡಿಯೂರಪ್ಪ ಇಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಕೂಡ ಜಿಲ್ಲೆಯ ನಾನಾ ಕಡೆ ಬಹಿರಂಗ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.